ಬೆಳಗಾವಿ : ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವ ಘಟನೆ ಖಾನಾಪೂರದಲ್ಲಿ ನಡೆದಿದೆ. ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚುಂಚವಾಡ ಗ್ರಾಮದ ಬಾಲಕ ಅನಂತು ಧರ್ಮೇಂದ್ರ ಪಾಶೆಟ್ಟಿ(15) ಸಾವನ್ನಪ್ಪಿದ ಬಾಲಕ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿರುವ ದನ-ಕರುಗಳಿಗೆ ಮೇವು ಹಾಕಲು ಹೋದಾಗ ಗೋಡೆ ಏಕಾಏಕಿ ಕುಸಿದು ಬಿದ್ದಿದ್ದರಿಂದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ನಂದಗಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










