ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರ ಬಂಧನ…

74
firstsuddi

ಪಾಟ್ನಾ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಬಿಹಾರ ಪೊಲೀಸರು ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಜಾರ್ಖಂಡ್ ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅವರ ಪತ್ನಿ ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ. ಜುಲೈ 11ರಂದು ಖಚಿತ ಮಾಹಿತಿ ಮೇರೆಗೆ ಬಿಹಾರದ ನಯಾ ಟೋಲಾ ಪ್ರದೇಶದಲ್ಲಿ ದಾಳಿ ನಡೆಸಿ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ.

ಬಂಧನದ ವೇಳೆ ಶಂಕಿತ ಭಯೋತ್ಪಾದಕರಿಂದ ‘ಇಂಡಿಯಾ 2047- ಟುವರ್ಡ್ಸ್ ರೂಲ್ ಆಫ್ ಇಸ್ಲಾಂ ಇನ್ ಇಂಡಿಯಾ’ ಶೀರ್ಷಿಕೆಯ ಎಂಟು ಪುಟಗಳ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಜೋಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.

ಜುಲೈ 12ರ ಪಾಟ್ನಾ ಪ್ರವಾಸದ ವೇಳೆ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಆರೋಪಿಗಳು ಜುಲೈ 6 ಮತ್ತು 7ರಂದು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು. 2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಜಾರಿ ಮಾಡುವುದು ಈ ತಂಡದ ಗುರಿಯಾಗಿತ್ತು.

ಬಂಧಿತ ದಂಪತಿ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ದೇಶವಿರೋಧಿ ಅಭಿಯಾನ ನಡೆಸಲು ಹಣ ಪಡೆಯುತ್ತಿದ್ದರು, ಪಿಎಫ್ ಐಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಜಲಾವುದ್ದೀನ್ ಈ ಹಿಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಎಸ್ ಐಎಮ್ ಐ)ದೊಂದಿಗೆ ಸಂಬಂಧ ಹೊಂದಿದ್ದರು.

ಬಿಹಾರ ಪೊಲೀಸರು ಭೇದಿಸಿರುವ ಶಂಕಿತ ಭಯೋತ್ಪಾದಕರ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬಿಹಾರದ ಹೆಚ್ಚುವರಿ ಮಹಾನಿರ್ದೇಶಕ (ಹೆಡ್ ಕ್ವಾರ್ಟರ್ಸ್) ಜೆಎಸ್ ಗಂಗ್ವಾರ್ ತಿಳಿಸಿದ್ದಾರೆ.