ಬೆಳಗಾವಿ ಸುವರ್ಣಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ.

28

ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧ ಆವರಣದಲ್ಲಿ ಬೃಹದಾಕಾರದ ಮಹಾತ್ಮ ಗಾಂಧೀಜಿ ಕಂಚಿನ ಪುತ್ಥಳಿ ಅನಾವರಣಗೊಂಡಿತು. 25 ಅಡಿ ಎತ್ತರದ ಬಾಪೂಜಿ ಪುತ್ಥಳಿಯನ್ನು ಚರಕ ನೇಯ್ಯುವ ಮೂಲಕ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು. ಗಾಂಧಿ ಪ್ರತಿಮೆ ಉದ್ಘಾಟನೆ ಆಗುತ್ತಿದ್ದಂತೆ ಇತ್ತ ಸುವರ್ಣಸೌಧದ ಆವರಣದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಬೆಳಗಾವಿ ಇಡೀ ದೇಶಕ್ಕೆ ಗೌರವ ತಂದುಕೊಡುವ ಸ್ಥಳವಾಗಿದೆ. ಯಾಕೆಂದರೆ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಅಂತಹ ಮಹಾತ್ಮನ ಪುತ್ಥಳಿ ಉದ್ಘಾಟನೆ ನನ್ನ ಕೈಯಿಂದ ಆಗಿದ್ದಕ್ಕೆ ನನ್ನ ಜೀವನ ಧನ್ಯವಾಯಿತು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದು ಸಾರುವ ಗಾಂಧಿ ಮೂರ್ತಿ ಇಡೀ ದೇಶಕ್ಕೆ ಗೌರವ. ಇಡೀ ಜಗತ್ತು ಮಹಾತ್ಮ ಗಾಂಧೀಜಿ ಅವರನ್ನು ಗೌರವಿಸುತ್ತದೆ.