ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾ ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಪಿಯಾನ್ ನ ಝೈನಾಪೋರಾ ಪ್ರದೇಶದ ಮುಂಜ್ ಮಾರ್ಗ್ ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಈ ವೇಳೆ ಭಯೋತ್ಪಾದಕರು ಸಿಕ್ಕಿಬಿದ್ದಿದ್ದು, ಗುಂಡಿನ ಚಕಮಕಿ ಪ್ರಾರಂಭವಾಗಿದೆ.
ಹತರಾಗಿರುವ ಮೂವರು ಭಯೋತ್ಪಾದಕರಲ್ಲಿ ಇಬ್ಬರ ಗುರುತು ಪತ್ತೆಹಚ್ಚಲಾಗಿದೆ. ಅದರಲ್ಲೊಬ್ಬ ಕಾಶ್ಮೀರ ಪಂಡಿತ್ ಪುರಾಣ ಕೃಷ್ಣ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಲತೀಫ್ ಲೋನ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ನೇಪಾಳದ ಟಿಲ್ ಬಹದ್ದೂರ್ ಥಾಪಾ ಹತ್ಯೆಯಲ್ಲಿ ಭಾಗಿಯಾಗಿದ್ದ ಉಮರ್ ನಜೀರ್ ಎಂದು ಗುರುತಿಸಲಾಗಿದೆ. ಉಗ್ರರಿಂದ 1 ಎಕೆ 47 ರೈಫಲ್ ಮತ್ತು 2 ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಎಡಿಜಿಪಿ ಹೇಳಿದ್ದಾರೆ.










