ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮತ್ತು ಕೆಂಪೇಗೌಡರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ದೇವನಹಳ್ಳಿ ತಾಲೂಕಿನ ಭುವನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ ಕನಕದಾಸ, ಓಬವ್ವ ಅವರನ್ನು ಸ್ಮರಿಸಿದರು. ಕನಕದಾಸರ ಕುಲ ಕುಲ ಎಂದು ಹೊಡೆದಾಡಬೇಡಿ ಕೀರ್ತನೆಯನ್ನು ಭಾಷಣದಲ್ಲಿ ಪ್ರಸ್ತಾಪಿಸಿ ಕೆಂಪೇಗೌಡರ ಕೆಲಸವನ್ನು ನೆನಪಿಸಿಕೊಂಡರು.
ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ಡಬಲ್ ಎಂಜಿನ್ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಆರ್ಥಿಕ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆಯನ್ನು ಪ್ರಸ್ತಾಪಿಸಿ ಹಾಡಿ ಹೊಗಳಿದರು. 2014ಕ್ಕೆ ಮೊದಲು ದೇಶದಲ್ಲಿ ಒಟ್ಟು 70 ವಿಮಾನ ನಿಲ್ದಾಣಗಳು ಇದ್ದವು. ಆದರೆ ಈಗ ಇದು 140ಕ್ಕೆ ಏರಿಕೆಯಾಗಿದೆ. ಭಾರತದ ಅಭಿವೃದ್ಧಿಯಲ್ಲಿ ಸಂಪರ್ಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಾಯು ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳನ್ನು ರಚಿಸುವುದು ಈ ಸಮಯದ ಅಗತ್ಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಬೆಳವಣಿಗೆಯನ್ನು ಸಾಧಿಸಲು ನಾವು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.
ಮೂರು ವರ್ಷ ಇಡೀ ವಿಶ್ವ ಕೋವಿಡ್ ಸಾಂಕ್ರಾಮಿಕದಿಂದ ಬಳಲಿತ್ತು. ಕೋವಿಡೋತ್ತರ ಕಾಲಘಟ್ಟದಲ್ಲಿ ದೇಶವು ಆರ್ಥಿಕವಾಗಿ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, ಇದರಲ್ಲಿ ಕರ್ನಾಟಕದ ಪಾಲು ಸಾಕಷ್ಟಿದೆ. ಬೆಂಗಳೂರು ‘ಸ್ಟಾರ್ಟ್-ಅಪ್’ ಮನೋಭಾವವನ್ನು ಪ್ರತಿನಿಧಿಸುತ್ತದೆ. ಪ್ರಪಂಚದಾದ್ಯಂತ, ಭಾರತವು ತನ್ನ ಸ್ಟಾರ್ಟ್ಅಪ್ಗಳಿಗೆ ಹೆಸರುವಾಸಿಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆಯಿಂದ ಕರ್ನಾಟಕಕ್ಕೂ ಲಾಭವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಸುಮಾರು 4 ಲಕ್ಷ ಕೋಟಿ ಹೂಡಿಕೆ ಕರ್ನಾಟಕದಲ್ಲಿ ಆಗಿದೆ. ಇದು ಅಭಿವೃದ್ಧಿಯ ಸಂಕೇತ ಎಂದು ಅವರು ಹೇಳಿದರು.
ದೇಶದಲ್ಲಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಆಕರ್ಷಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದು ಕೇವಲ ಐಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಜೈವಿಕ ತಂತ್ರಜ್ಞಾನದಿಂದ ತೊಡಗಿ ರಕ್ಷಣಾ ಉತ್ಪಾದನೆವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ಕರ್ನಾಟಕ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ಉದ್ದಿಮೆಯಲ್ಲಿಯೂ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ದೇಶದ ಸೇನೆಗೆ ಏರ್ಕ್ರಾಫ್ಟ್, ಹೆಲಿಕಾಪ್ಟರ್ ನಿರ್ಮಿಸುವಲ್ಲಿಯೂ ಕರ್ನಾಟಕದ ಕೊಡುಗೆ ದೊಡ್ಡದು. ವಾಹನ ಉತ್ಪಾದನೆಯಲ್ಲಿಯೂ ರಾಜ್ಯ ಮುಂದಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿಯೂ ಕರ್ನಾಟಕ ಮುಂದಿದೆ. ಫಾರ್ಚೂನ್ 400 ಪಟ್ಟಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಇಂದು ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಿಕ್ಕಿದೆ. ಒಂದೇ ಭಾರತ್ ಕೇವಲ ರೈಲು ಅಲ್ಲ. ಇಂದು ಮೇಡ್ ಇಂಡಿಯಾದ ನವ ಭಾರತದ ರೈಲು. ಇದು ಅಭಿವೃದ್ಧಿಯ ರೈಲು. ಭಾರತ ಅಭಿವೃದ್ಧಿ ಹೊಂದುತ್ತಿದೆ ಎನ್ನುವುದು ತೋರಿಸುವ ರೈಲು. ನಮ್ಮ ಸರ್ಕಾರ ರೈಲ್ವೇಗೆ ಕಾಯಕಲ್ಪ ನೀಡಲು ಆರಂಭಿಸಿದ್ದು ವಿಸ್ಟಾಡೋಮ್ ಪರಿಚಯಿಸಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈಲುಗಳು ಮಾತ್ರವಲ್ಲ ನಿಲ್ದಾಣಗಳನ್ನು ಹೈಟೆಕ್ ಆಗುತ್ತಿದೆ. ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಿದ್ದೇವೆ. ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.










