ಭಾರತೀಯ ಸೇನೆಯ ವಿಚಾರದಲ್ಲಿ ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತೀಯ ಸೇನೆ ಸನ್ನದ್ದವಾಗಿದೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟ್ಯಾಗ್ ಮಾಡಿದ್ದ ನಟಿ ಗಾಲ್ವಾನ್ ಹಾಯ್ ಹೇಳುತ್ತಿದೆ ಎಂದು ಬರೆದುಕೊಂಡಿದ್ದರು. ಇದು ಭಾರೀ ಸದ್ದು ಮಾಡಿತ್ತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡ ರಿಚಾ ಚಡ್ಡಾ ತಪ್ಪಿನ ಅರಿವಾಗಿ ತಮ್ಮ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ. ಜೊತೆಗೆ ಮತ್ತೊಂದು ಟ್ವೀಟ್ ಮಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿರಲಿಲ್ಲವಾದರೂ, ವಿವಾದಕ್ಕೆ ಕಾರಣವಾದ ಆ ಮೂರು ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಸೇನೆಯನ್ನು ನೋಯಿಸುವ ಯಾವ ಉದ್ದೇಶವೂ ಇರಲಿಲ್ಲ ಎಂದು ರಿಚಾ ಚಡ್ಡಾ ಟ್ವೀಟ್ ಮೂಲಕ ಕ್ಷಮೆ ಕೇಳಿದ್ದಾರೆ.










