ಭಾರತ ಧ್ವಜ ಹಿಡಿದು ಯುದ್ಧಪೀಡಿತ ಉಕ್ರೇನ್​ನಿಂದ ಸುರಕ್ಷಿತವಾಗಿ ಪಾರಾದ ಪಾಕ್, ಟರ್ಕಿಶ್ ವಿದ್ಯಾರ್ಥಿಗಳು.

86
firstsuddi

ಬುಕಾರೆಸ್ಟ್ : ಉಕ್ರೇನ್-ರಷ್ಯಾ ಮಧ್ಯೆ ಕಳೆದ ಏಳು ದಿನಗಳಿಂದ ಯುದ್ಧ ಮುಂದುವರೆದಿದ್ದು, ಯುದ್ಧಪೀಡಿತ ಉಕ್ರೇನ್ ನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು, ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ದೇಶಗಳಿಗೆ ವಾಪಸ್ ಆಗಲು ಶತಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಭಾರತದ ಧ್ವಜ ಕೇವಲ ಭಾರತೀಯರಿಗಷ್ಟೇ ಅಲ್ಲದೇ, ನೆರೆಯ ರಾಷ್ಟ್ರಗಳ ಪ್ರಜೆಗಳಿಗೂ ಉಕ್ರೇನ್ ಗಡಿ ಭಾಗಗಳನ್ನು ಸುರಕ್ಷಿತವಾಗಿ ದಾಟಲು ಸಹಕಾರಿಯಾಗಿದೆ.

ಉಕ್ರೇನ್ ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು, ಭಾರತೀಯ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಧ್ವಜವನ್ನು ನಾವೇ ತಯಾರಿಸಿದ್ದೆವು. ಕೆಲವು ಬಣ್ಣದ ಸ್ಪ್ರೇಗಳನ್ನು ಮತ್ತು ಅಗಲವಾದ ಬಟ್ಟೆಯನ್ನು ಖರೀದಿಸಿ ನಂತರ  ಬಟ್ಟೆಯನ್ನು ಕತ್ತರಿಸಿ ಅದನ್ನು ಭಾರತೀಯ ತ್ರಿವರ್ಣ ಧ್ವಜವನ್ನು ಮಾಡಲು ಕೇಸರಿ, ಬಿಳಿ, ಹಸಿರು ಬಣ್ಣದ ಸ್ಪ್ರೇ-ಪೇಂಟ್ ಮಾಡಿದೆವು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.