ಭೋಪಾಲ್ : ಭಿಕ್ಷೆ ಬೇಡಿದರೂ ಊಟ ಸಿಗದ ಹಿನ್ನಲೆ ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.
ರಿಂಕಿ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸುಮಾರು ಎರಡೂವರೆ ವರ್ಷದ ಹಿಂದೆ ರಾಜ್ಕುಮಾರ್ ಎಂಬಾತನನ್ನ ಈಕೆ ವಿವಾಹವಾಗಿದ್ದರು. ಈ ದಂಪತಿಗೆ 17 ತಿಂಗಳ ಮಗು ಕೂಡ ಇದೆ. ರಿಂಕಿಯ ಪತಿ ರಾಜ್ಕುಮಾರ್ ನಿನ್ನೆ ಪಡಿತರ ತೆಗೆದುಕೊಂಡು ಬರಲು ಹೊರಟ್ಟಿದ್ದು, ಹಿಂದಿರುಗಿದಾಗ ರಿಂಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಒಂದು ವಾರದಿಂದ ಇಬ್ಬರಿಗೂ ಸರಿಯಾದ ಆಹಾರ ಸಿಕ್ಕಿರಲಿಲ್ಲ. ಪಾರ್ದಿ ಸಮುದಾಯದವರಾದ ಕಾರಣದಿಂದ ಯಾರೂ ಕೆಲಸ ಕೊಡುತ್ತಿರಲಿಲ್ಲವಂತೆ. ಇದರಿಂದಾಗಿಯೇ ರಿಂಕಿ ಭಿಕ್ಷಾಟನೆಗೆ ತೆರಳುತ್ತಿದ್ದಳು. ಆಗಾಗ ಒಂದೇ ರೊಟ್ಟಿಯನ್ನೇ ಅರ್ಧ-ಅರ್ಧ ಹಂಚಿ ತಿನ್ನುತ್ತಿದ್ದೆವು. ನಮ್ಮ ಕುಟುಂಬಕ್ಕೆ ರೇಷನ್ ಆಪ್ಕೆ ದ್ವಾರಾ ಯೋಜನೆಯ ಪಡಿತರ ಚೀಟಿಯೂ ಇತ್ತು. ಆದರೆ ಹಲವು ಬಾರಿ ಪಡಿತರ ಅಂಗಡಿಗೆ ತೆರಳಿದರೂ ನನಗೆ ಪಡಿತರ ಸಿಕ್ಕಿರಲಿಲ್ಲ. ಇದರಿಂದಾಗಿ ಕುಟುಂಬ ಉಪವಾಸ ಬೀಳುವಂತಾಗಿತ್ತು ಎಂದು ರಾಜಕುಮಾರ್ ಹೇಳಿದ್ದಾರೆ.
ಮಹಿಳೆಯ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಂದು ಎಸ್‌ಡಿಒಪಿ ನಿತೇಶ್ ಪಟೇಲ್ ತಿಳಿಸಿದ್ದಾರೆ.
ಊಟ ಹೆಚ್ಚಾಯ್ತೆಂದು ಅಥವಾ ಊಟ ಸರಿಯಿಲ್ಲವೆಂದು ಹಲವರು ಆಹಾರವನ್ನು ಪೋಲು ಮಾಡುತ್ತಾರೆ. ಆದರೆ ಆಹಾರ ಪೋಲು ಮಾಡುವ ಮುನ್ನ ಒಮ್ಮೆ ಯೋಚಿಸಿ. ಏಕೆಂದರೆ ಪೋಲು ಮಾಡಲಿರುವ ಊಟ ಎಷ್ಟೋ ಹಸಿದವರ ಜೀವಗಳನ್ನು ಕಾಪಾಡುತ್ತವೆ.










