ಲಂಡನ್ : ಮಗನ ಕಣ್ಣಿಗೆ ಐ ಡ್ರಾಪ್ ಹಾಕುವ ಬದಲು ತಂದೆ ಅಂಟೊಂದನ್ನು ಹಾಕಿರುವ ಘಟನೆ ಇಂಗ್ಲೆಂಡ್ ನ ಉತ್ತರ ಯಾರ್ಕ್ ಶಿರ್ ನಲ್ಲಿ ನಡೆದಿದೆ.
ಕೆವಿನ್ ಡೇ ಎಂಬಾತ ತನ್ನ 11 ವರ್ಷದ ಮಗ ರೂಪರ್ಟ್ ಗೆ ಐ ಡ್ರಾಪ್ ಬದಲು ಅಂಟನ್ನು ಹಾಕಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ರೂಪರ್ಟ್ ಗೆ ತಂದೆ ಕೆವಿನ್ ಡೇ ಕೆಲ ದಿನಗಳಿಂದ ಐ ಡ್ರಾಪ್ ಹಾಕುತ್ತಿದ್ದರು. ಆದರೆ ಒಮ್ಮೆ ತಿಳಿಯದೆಯೇ ಅಂಟನ್ನು ಹಾಕಿದ್ದಾರೆ. ಯಾವಾಗ ಮಗನಿಗೆ ಕಣ್ಣು ತೆಗೆಯಲು ಅಗಲಿಲ್ಲವೋ ಆಗಲೇ ಆ ತಂದೆಗೆ ತಮ್ಮ ಪ್ರಮಾದದ ಅರಿವಾಗಿದೆ.
ಕೂಡಲೇ ಕೆವಿನ್ ಡೇ ತಕ್ಷಣ ಆಸ್ಪತ್ರೆಗೆ (999) ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವೈದ್ಯರು ಆಸ್ಪತ್ರಗೆ ಕರೆತರುವಂತೆ ಸಲಹೆ ನೀಡಿದ್ದಾರೆ. ನಂತರ ಹ್ಯಾರೊಗೇಟ್ ಆಸ್ಪತ್ರೆ ವೈದ್ಯರು ಸುಮಾರು 4 ದಿನಗಳ ಕಾಲ ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡಿ ಮತ್ತೆ ಕಣ್ಣನ್ನು ತೆರೆಯುವಂತೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೆವಿನ್ ಅವರು, ನನಗಂತೂ ತುಂಬಾ ಭಯವಾಗುತ್ತಿತ್ತು. ನಾನು ನನ್ನ ಮಗನ ಕಣ್ಣು ಹಾಳು ಮಾಡಿದೆ. ಅವನ ಜೀವನ ಹಾಳು ಮಾಡಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದೆ. ಆದರೆ ವೈದ್ಯರು ಸೂಕ್ತ ಚಿಕಿತ್ಸೆ ಮಾಡಿ ಮಗನ ಕಣ್ಣನ್ನು ಸರಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.










