ಪಾಟ್ನಾ : ಮಗಳನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಬಿಹಾರದ ಮಾಜಿ ಶಾಸಕರನ್ನು ಬಂಧಿಸಲಾಗಿದೆ. ಮರ್ಯಾದಾ ಹತ್ಯೆ ನಡೆಸಲು ಮಾಜಿ ಶಾಸಕ ಸುರೇಂದ್ರ ಶರ್ಮಾ ಅವರು 20 ಲಕ್ಷ ರೂ. ನೀಡಿರುವುದಾಗಿ ತನಿಖೆ ವೇಳೆ ಬಯಲಾಗಿದೆ ಎಂದು ನಗರ (ಪೂರ್ವ) ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಹೇಳಿದ್ದಾರೆ.
ಮಗಳು ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಮಾಜಿ ಶಾಸಕರಿಗೆ ಸಮಾಧಾನವಿರಲಿಲ್ಲ. ಸುರೇಂದ್ರ ಶರ್ಮಾ ಮಗಳನ್ನು ಜುಲೈ 1 ಮತ್ತು 2ರ ಮಧ್ಯರಾತ್ರಿ ಕೊಲೆ ಮಾಡಲು ಸುಪಾರಿ ಕಿಲ್ಲರ್ಸ್ ಯತ್ನಿಸಿದ್ದರು. ಆದರೆ ಗುರಿ ತಪ್ಪಿ ಅಪರಿಚಿತ ವ್ಯಕ್ತಿ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ನಂತರ ಈ ವಿಚಾರವಾಗಿ ಸುರೇಂದ್ರ ಶರ್ಮಾ ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಈ ಬಗ್ಗೆ ಶೋಧ ಕಾರ್ಯ ಆರಂಭಿಸಿದ ಪೊಲೀಸರು, ಶನಿವಾರದಂದು ಗ್ಯಾಂಗ್ ನ ಮುಖ್ಯಸ್ಥ ಅಭಿಷೇಕ್ ಅಲಿಯಾಸ್ ಛೋಟೆ ಸರ್ಕಾರ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಭಿಷೇಕ್ ಸುರೇಂದ್ರ ಶರ್ಮಾ ಅವರ ಹೆಸರನ್ನು ಬಹಿರಂಗ ಪಡಿಸಿದ್ದಾನೆ. ಆರೋಪಿಗಳಿಂದ ದೇಶಿ ನಿರ್ಮಿತ ಪಿಸ್ತೂಲ್ ಗಳು, ಹಲವಾರು ಕಾರ್ಟ್ರಿಡ್ಜ್ ಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.










