ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆ ಅನೂರ್ಜಿತ…

51
firstsuddi

ತುಮಕೂರು: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಬಿ.ಸಿ.ಗೌರಿಶಂಕರ್ ಅವರ ಆಯ್ಕೆ ಅನೂರ್ಜಿತಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ಮತದಾರರಿಗೆ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ. ಹೀಗಾಗಿ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಇಂದು ತೀರ್ಪು ನೀಡಿದೆ. ಆದರೆ, ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಆದೇಶಕ್ಕೆ ತಡೆ ಕೋರಿ ವಕೀಲ ಹೇಮಂತ್ ರಾಜ್ ಮನವಿ ಮಾಡಿದ್ದಾರೆ. ಈ ಮನವಿಯನ್ನು ಹೈಕೋರ್ಟ್ ಪರಿಗಣಿಸಿ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.

30 ದಿನಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಒಂದು ವೇಳೆ ಸುಪ್ರೀಂ ಕೋರ್ಟ್​ನಿಂದ ಹೈಕೋರ್ಟ್ ಆದೇಶಕ್ಕೆ ತಡೆ ಸಿಗದಿದ್ದರೆ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.