ಮತ್ತೆ ಕೋವಿಡ್ ಉಲ್ಬಣ – ಮೋದಿ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ…

62
firstsuddi

ನವದೆಹಲಿ : ಚೀನಾ, ಜಪಾನ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಮಹಾಮಾರಿ ಕೊರೊನಾ ವೈರಸ್ ಉಲ್ಬಣಗೊಂಡಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ರಾಷ್ಟ್ರದಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಪರಿಶೀಲಿಸಲು ಇಂದು ಮಧ್ಯಾಹ್ನ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಮತ್ತೆ ಮಹಾಮಾರಿ ಕೊರೊನಾ ವೈರಸ್ ಉಲ್ಬಣಗೊಂಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಚೀನಾ ಸೇರಿದಂತೆ ಇತರ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಮತ್ತೆ ಕೋವಿಡ್ ಪರೀಕ್ಷೆಗೆ ಕೇಂದ್ರ ಆರೋಗ್ಯ ಇಲಾಖೆ ಆದೇಶ ನೀಡಿದೆ. 

ದೇಶದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಬುಧವಾರ ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ ದೆಹಲಿಯು ಐದು ಕೋವಿಡ್-19 ಪ್ರಕರಣಗಳನ್ನು 0.19 ಶೇಕಡಾ ಧನಾತ್ಮಕ ದರದೊಂದಿಗೆ ದಾಖಲಿಸಿದೆ. ಅದರಲ್ಲಿ ಒಂದು ಸಾವು ಕೂಡ ದಾಖಲಾಗಿದೆ. ರಾಷ್ಟ್ರ ರಾಜಧಾನಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,007,102 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 26,520 ಆಗಿದೆ.