ಲಕ್ನೋ : ಮದುವೆ ಸಮಾರಂಭದ ವೇಳೆ ಬಾವಿಗೆ ಬಿದ್ದು 13 ಮಹಿಳೆಯರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಮದುವೆ ಮನೆಯಲ್ಲಿದ್ದ ಹಳೆಯ ಬಾವಿಗೆ ಸ್ಲ್ಯಾಬ್ ಹಾಕಿ, ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಿವಾಹ ಸಮಾರಂಭ ಇದ್ದುದರಿಂದ ಅನೇಕರು ಬಂದು ಅಲ್ಲಿಯೇ ಕುಳಿತಿದ್ದರು. ಈ ವೇಳೆ ಭಾರ ಹೆಚ್ಚಾಗಿ ಸ್ಲ್ಯಾಬ್ ಏಕಾಏಕಿ ಕುಸಿತಗೊಂಡ ಪರಿಣಾಮ ಬಾವಿಯೊಳಗೆ ಬಿದ್ದು ಸುಮಾರು 9 ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕುಶಿನಗರ ಜಿಲ್ಲಾಧಿಕಾರಿ ಎಸ್.ರಾಜಲಿಂಗಮ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಶಿನಗರದಲ್ಲಿ ನಡೆದ ದುರ್ಘಟನೆ ನಿಜಕ್ಕೂ ಹೃದಯ ಕಲುಕುವಂತಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಇದರಲ್ಲಿ ಗಾಯಗೊಂಡವರೂ ಇದ್ದು, ಅವರೆಲ್ಲ ಆದಷ್ಟು ಬೇಗ ಗುಣಮುಖರಾಗಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಸಾಧ್ಯವಿರುವ ಎಲ್ಲ ಸಹಾಯಗಳನ್ನೂ ನೀಡಬೇಕು ಎಂದು ಹೇಳಿದ್ದಾರೆ.