ವಿಜಯನಗರ: ಮದುವೆಯಾಗಲು ಹುಡುಗಿ ಸಿಗದಿದ್ದಕ್ಕೆ ಮನನೊಂದು ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.
ಗುಡೇಕೋಟೆ ಗ್ರಾಮದ ಬಿ.ಮಧುಸೂಧನ್ (26) ಮೃತ ಯುವಕ. ಆತ ಜ.5 ರಂದೇ ವಿಷ ಸೇವಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಯುವಕ ವಿಷ ಸೇವಿಸಲು ಕಾರಣವೇನು ಎಂಬುದರ ಬಗ್ಗೆ ಮೊದಲಿಗೆ ತಿಳಿದು ಬಂದಿರಲಿಲ್ಲ. ಆತ ಮೃತಪಟ್ಟ ಬಳಿಕ ಪೊಲೀಸರು ಆತನ ಸ್ನೇಹಿತರನ್ನು ವಿಚಾರಿಸಿದಾಗ ಯುವಕನ ಸಾವಿಗೆ ಕಾರಣ ತಿಳಿದು ಬಂದಿದೆ.
ಮೃತ ಯುವಕ ಸ್ನೇಹಿತರೊಂದಿಗೆ, ಮದುವೆ ವಯಸ್ಸಾಗಿದ್ದರೂ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರವನ್ನು ಹೇಳಿಕೊಂಡಿದ್ದ. ಆತನ ತಂದೆ ಮಾನಸಿಕ ಅಸ್ವಸ್ಥರಾಗಿದ್ದು, ಯುವಕನ ಮದುವೆಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ ಎನ್ನಲಾಗಿದೆ.
ಈ ಕುರಿತು ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










