ಮದ್ಯದ ಅಮಲಿನಲ್ಲಿ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನ – ಪ್ರಯಾಣಿಕನ ಬಂಧನ…

48
firstsuddi

ನವದೆಹಲಿ : ಪಾನಮತ್ತ ಪ್ರಯಾಣಿಕನೊಬ್ಬ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಘಟನೆ ನಡೆದಿದೆ.

ನಿನ್ನೆ ಬೆಳಗ್ಗೆ 7.56ಕ್ಕೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ 6E 308 ವಿಮಾನದಲ್ಲಿ ಈ ಘಟನೆ ನಡೆದಿದೆ. 40 ವರ್ಷದ ಪ್ರತೀಕ್ ಎಂಬಾತ ಪಾನಮತ್ತನಾಗಿ ಹಾರಾಟದ ಮಧ್ಯೆಯೇ ವಿಮಾನದ ಎಮರ್ಜೆನ್ಸಿ ಡೋರ್(ತುರ್ತು ನಿರ್ಗಮನ ಬಾಗಿಲು) ತೆರೆಯಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಆತನನ್ನು ತಡೆದಿದ್ದಾರೆ.

ಪ್ರಯಾಣಿಕ ಪ್ರತೀಕ್ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತನಾಗಿರುವ ಪ್ರತೀಕ್ ಕಾನ್ಪುರ ಮೂಲದವರಾಗಿದ್ದು, ಇ-ಕಾಮರ್ಸ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.

ವಿಮಾನವು ಬೆಂಗಳೂರು ತಲುಪಿದ ನಂತರ ಪ್ರತೀಕ್ ನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಸಹ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರತೀಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.