ಮಲೆನಾಡಿನ ಕಾಡು ಕಡಲೆ ಗಿಡಕ್ಕೆ ಕರಾವಳಿಯಲ್ಲಿ ಬಾರಿ ಬೇಡಿಕೆ…

1041
firstsuddi

ಮೂಡಿಗೆರೆ : ಮಲೆನಾಡಿನಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಬರಲು ಕಡಲೆ ಗಿಡಕ್ಕೆ ಬಾರಿ ಬೇಡಿಕೆ ಬಂದಿದ್ದು ಕರಾವಳಿ ಭಾಗಕ್ಕೆ ಲೋಡುಗಟ್ಟಲೆ ಬರಲು ಕಡಲೆ ಗಿಡಗಳು ಸಾಗಣೆಯಾಗುತ್ತಿದೆ.
ಈ ಗಿಡವೂ ಔಷಧಿಯ ಗುಣಗಳನ್ನು ಹೊಂದಿದೆ ಎನ್ನಲಾಗಿದ್ದು ಕರಾವಳಿ ಭಾಗದಿಂದ ಬರುವ ಕೆಲವರು ಮೂಡಿಗೆರೆ ತಾಲ್ಲೂಕಿನಾದ್ಯಂತ ರಸ್ತೆ ಬದಿಯಲ್ಲಿ, ಗದ್ದೆ ತೋಟಗಳಲ್ಲಿ, ಸರ್ಕಾರಿ ಗೋಮಾಳಗಳಲ್ಲಿ ಬೆಳೆದ ಬರಲು ಕಡಲೆ ಗಿಡವನ್ನು ಕಿತ್ತು ಕೊಂಡೊಯ್ಯುತ್ತಿದ್ದಾರೆ. ಕೆಜಿಗೆ 30 ರೂ ರಂತೆ ಈ ಬರಲು ಕಡಲೆ ಗಿಡಕ್ಕೆ ಬೇಡಿಕೆ ಇದ್ದು ಈ ಗಿಡದ ಬೇರು ಆರ್ಯುವೇದಿಕ್ ಔಷಧಿಗೆ ಬಳಸುವುದಿಂದ ಈ ಗಿಡಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ.
ಮಲೆನಾಡಿನಲ್ಲಿ ಈ ಕಳೆ ಸಸ್ಯವನ್ನು ಪೊರಕೆ ಮಾಡಲು ಉಪಯೋಗಿಸುತ್ತಾರೆ. ಆದರಿಂದಲೆ ಇದಕ್ಕೆ ಬರಲು ಕಡಲೆ ಗಿಡ ಎಂದು ಹೆಸರು ಬಂದಿದ್ದು ಮಲೆನಾಡಿಗರಿಗೆ ಇದರ ಔಷಧಿಯ ಗುಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಬರಲು ಕಡಲೆ ಗಿಡದ ಬೇರನ್ನು ಜಜ್ಜಿ ಜೀರಿಗೆ ರಸದೊಂದಿಗೆ ಸೇರಿಸಿ ಕುದಿಸಿ ಸೇವಿಸಿದರೆ ಹೊಟ್ಟೆನೋವು, ಜ್ವರ, ಶೀತ, ಮೈಕೈನೋವು ಕಡಿಮಯಾಗುತ್ತದೆ. ಇದಷ್ಟೆ ಅಲ್ಲದೇ ಇನ್ನಿತರ ರೋಗಗಳಿಗೂ ಈ ಗಿಡದಿಂದ ಔಷಧಿ ತಯಾರಿಸುವುದರಿಂದ ಈ ಗಿಡಕ್ಕೆ ಬಾರಿ ಬೇಡಿಕೆ ಬಂದಿದೆ.
ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಖಾಲಿ ಜಾಗದಲ್ಲಿ ಈ ಗಿಡಗಳು ಸಾವಿರಾರು ಸಂಖ್ಯೆಯಲ್ಲಿ ಬೆಳೆದು ನಿಂತಿರುತ್ತವೆ. ಬೇಡಿಕೆ ಬಂದ ಕಾರಣದಿಂದ ಈ ಗಿಡಗಳನ್ನು ಕೀಳುವುದರಿಂದ ಭೂಸವಕಳಿ ಸಂಭವಿಸುವ ಸಾದ್ಯತೆ ಇದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಕಡಲೆ ಬರಲು ಗಿಡವೂ ಕಳೆಸಸ್ಯವಾಗಿದ್ದು ಅರಣ್ಯ ಇಲಾಖೆ ಕಾನೂನಿನ ಅಡಿ ಈ ಸಸ್ಯದ ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ ಎನ್ನುತ್ತಾರೆ.
ಮಲೆನಾಡಿನ ಕಳೆಸಸ್ಯವೊಂದು ಕರಾವಳಿಯಲ್ಲಿ ಬೇಡಿಕೆ ಸಸ್ಯವಾಗಿದ್ದು ಮಲೆನಾಡಿಗರಿಗೆ ಅದರ ಮಹತ್ವ ತಿಳಿಯದೇ ಇರುವುದು ವಿಪರ್ಯಾಸವೇ ಸರಿ.