ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜೀವನದಿಗಳಾದ ಹೇಮಾವತಿ, ತುಂಗ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ಮೂಡಿಗೆರೆ ತಾಲೂಕಿನ ಕಿತ್ತಳೆಗಂಡಿ ಸಮೀಪವಿರುವ ಹೇಮಾವತಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಕೊಟ್ಟಿಗೆಹಾರ, ಜಾವಳಿ ಭಾಗದಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಹೇಮಾವತಿ ನದಿ ಪ್ರವಾಹದ ರೀತಿ ಹರಿಯುತ್ತಿದ್ದು, ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಇನ್ನು ಕುದುರೆಮುಖ, ಶೃಂಗೇರಿಯ ಕೆರೆಕಟ್ಟೆ, ಕೊಪ್ಪ ಭಾಗದಲ್ಲೂ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಇನ್ನು ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮೂಡಿಗೆರೆ ಭಾಗದ ಜನರು ಮನೆಯಿಂದ ಹೊರ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.