ಮಳೆಯೂ ಇದೆ, ರಾಜಕಾರಣದ ದೊಂಬರಾಟವೂ ಇದೆ : ಕಾರ್ಣಿಕ ಭವಿಷ್ಯ…

1033

ಕಡೂರು : ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದ್ದಾಯಿತು. ಉತ್ತಮ ಮಳೆ ಸುರಿಸಿದಾವು, ಸರ್ವರು ಎಚ್ಚರದಿಂದಿರಬೇಕು ಎಂದು ಭವಿಷ್ಯ ನುಡಿಯುವ ಮೂಲಕ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಬೀರೂರಿನ ಸರಸ್ವತಿಪುರದ ಇತಿಹಾಸ ಪ್ರಸಿದ್ದ ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ಇಂದು ಮುಂಜಾನೆ ಮುಕ್ತಾಯಗೊಂಡಿದೆ. ರಾಮನ ಬಾಣ ಗುರಿ ತಪ್ಪಿಲ್ಲ, ಮೈಲಾರಲಿಂಗ ಸ್ವಾಮಿಯ ಮಾತು ಸುಳ್ಳಗಾಲ್ಲ, ಪಂಜರದ ಗಿಳಿಗಳು ಹಾರಿ ಹೋದಾವು, ರಾಜಕಾರಣಿಗಳ ಪಕ್ಷಾಂತರ ಇನ್ನೂ ಮುಗಿದಿಲ್ಲ. ಕಟ್ಟಿದ ಕೋಟೆ ಪರರದ್ದಾಯಿತು, ಮಳೆ ಇನ್ನೂ ಮುಗಿದಿಲ್ಲ, ಜನ ಮಳೆ ಹಾಗೂ ರಾಜಕಾರಣದಲ್ಲಿ ಎಚ್ವರದಿಂದಿರಬೇಕೆಂದು ಮೈಲಾರಲಿಂಗ ಸ್ವಾಮಿ ಭವಿಷ್ಯ ನುಡಿದಿದೆ. ಇದು ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ಮೈಲಾರಲಿಂಗ ಸ್ವಾಮಿಯ ದಶರಥ ಪೂಜಾರರ ಬಾಯಲ್ಲಿ ಬಂದ ಕಾರ್ಣಿಕದ ನುಡಿಗಳು.
ಬುಧವಾರ ಬೆಳಗಿನ ಜಾವ 5 ಗಂಟೆಗೆ ಇಲ್ಲಿನ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗ ಕುಣಿತ ಅದ್ಬುತವಾಗಿರುವುದನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ನಂತರ ಮೈಲಾರಲಿಂಗ ಸ್ವಾಮಿ ಪೂಜಾರರನ್ನು ಕಾರ್ಣಿಕ ನುಡಿಯಲು ಪ್ರೇರೆಪಿಸುತ್ತಿದ್ದಂತೆ ಗೊರವಯ್ಯನವರ ಢಮರುಗ ಶಬ್ದ ಎಂತವರನ್ನು ಭಕ್ತಿಯ ಅಲೆಯಲ್ಲಿ ತೇಲಿಸುತ್ತದೆ. ಮಹಾನವಮಿ ಬಯಲಿನಲ್ಲಿ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜಯಘೋಷ ಮೊಳಗಿ ಕಾರ್ಣಿಕ ನುಡಿಯುವ ಸಮಯ ಬಂದಾಗ ಹುಟ್ಟಿದ ಕೂಸು ಸಹ ಅಳು ನಿಲ್ಲಿಸುತ್ತದೆ ಎಂಬ ಮಾತಿದೆ. ಇಲ್ಲಿ ನುಡಿಯುವ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗನ ಕಾರ್ಣಿಕ ಕೇಳಿ ಅಂಬನ್ನು ಹೊಡೆದಾಗ ದಸರಾ ಮುಕ್ತಾಯಗೊಂಡಿದೆ….