ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲರಾಗಿ ರಮೇಶ್ ಬೈಸ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ರಮೇಶ್ ಬೈಸ್ ಅವರಿಗೆ ಬಾಂಬೆ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶ ಎಸ್.ವಿ. ಗಂಗಾಪುರ್ವಾಲ ಅವರು ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಶ್ವೇತಾ ಸಿಂಘಲ್ ಮತ್ತು ಪ್ರಾಚಿ ಜಾಂಭೇಕರ್ ಮೊದಲಾದವರೂ ಉಪಸ್ಥಿತರಿದ್ದರು.
2019ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕವಾಗಿದ್ದ ಭಗತ್ ಸಿಂಗ್ ಕೋಶ್ಯಾರಿ ಕಳೆದ ವಾರ ರಾಜೀನಾಮೆ ನೀಡಿದ್ದರು. ಅವರ ಸ್ಥಾನವನ್ನು ರಮೇಶ್ ಬೈಸ್ ತುಂಬಿದ್ದಾರೆ.
ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿರುವ ರಮೇಶ್ ಬೈಸ್ ಅಪಾರ ರಾಜಕೀಯ ಅನುಭವ ಇರುವವರು. ಈಗಿನ ಛತ್ತೀಸ್ ಗಡ ರಾಜಧಾನಿ ರಾಯಪುರ್ ನಲ್ಲಿ ಹುಟ್ಟಿದ ಅವರು ಏಳು ಬಾರಿ ಸಂಸದರಾಗಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವರೂ ಆಗಿದ್ದರು. ಜಾರ್ಖಂಡ್ ಮತ್ತು ತ್ರಿಪುರಾದಲ್ಲಿ ರಾಜ್ಯಪಾಲರಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.










