ಲಕ್ನೋ: ಮಹಿಳೆಯೊಬ್ಬರನ್ನು ನಿಂದನೆ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ಬಿಜೆಪಿಯ ಕಿಸಾನ್ ಮೋರ್ಚಾ ಸದಸ್ಯನೆಂದು ಹೇಳಲಾದ ಶ್ರೀಕಾಂತ್ ತ್ಯಾಗಿ ಅವರ ನಿವಾಸದ ಮೇಲೆ ಬುಲ್ಡೋಜರ್ ದಾಳಿ ನಡೆಸಲಾಗಿದೆ.
ಪೊಲೀಸ್ ಸಿಬ್ಬಂದಿಯೊಂದಿಗೆ ನೋಯ್ಡಾದ ಸೆಕ್ಟರ್ -93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯನ್ನು ತಲುಪಿದ ಅಧಿಕಾರಿಗಳು, ಶ್ರೀಕಾಂತ್ ತ್ಯಾಗಿ ಅವರು ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ಕೆಡವಿದ್ದಾರೆ.
ಕೆಲವು ದಿನಗಳ ಹಿಂದೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ಸದಸ್ಯ ತ್ಯಾಗಿ ಮತ್ತು ಮಹಿಳೆಯ ನಡುವೆ ಜಗಳ ನಡೆದಿತ್ತು. ತ್ಯಾಗಿ ಅವರು ಕೆಲವು ಸಸಿಗಳನ್ನು ನೆಡಲು ಬಯಸಿದ್ದರು. ಆದರೆ, ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಮಹಿಳೆ ಅದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಇದೇ ಘಟನೆಗೆ ಸಂಬಂಧಿಸಿ ಶ್ರೀಕಾಂತ್ ತ್ಯಾಗಿ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಘಟನೆಯ ನಂತರ ಶ್ರೀಕಾಂತ್ ತ್ಯಾಗಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದ್ಯ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದು, ಪೊಲೀಸರು ಸತತ ಹುಡುಕಾಟ ನಡೆಸುತ್ತಿದ್ದಾರೆ.










