ಬೆಂಗಳೂರು : ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಹಿಳೆಯರಿಗೆ ಸರ್ಕಾರದಿಂದ ಬಂದೂಕು ಪರವಾನಗಿ ಕೊಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಗ್ಯಾಂಗ್ ರೇಪ್ ಪ್ರಕರಣ ಹೀನ ಕೃತ್ಯವಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವುದು ಶತಃಸಿದ್ಧ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರ ಬದ್ಧ. ಆದರೂ ಸಹ ಮಹಿಳೆ ಇಂತಹ ನೀಚಕೃತ್ಯಗಳಿಂದ, ಸ್ವಾವಲಂಬಿಯಾಗಿ ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಸರ್ಕಾರದಿಂದ ಮಹಿಳೆಯರಿಗೆ ಬಂದೂಕು ಪರವಾನಗಿ ನೀಡಿದರೆ ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಬರೆದುಕೊಂಡಿದ್ದಾರೆ.










