ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ವಿರುದ್ಧ ಮತ್ತೆ ಎರಡು ಎಫ್ಐಆರ್ ದಾಖಲು ಮಾಡಲಾಗಿದೆ. ಪಿಸಿ ಆ್ಯಕ್ಟ್ ಅಡಿ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 2 ರಂದು ನಡೆದ ಟ್ರ್ಯಾಪ್ ಕಾರ್ಯಚರಣೆ ವೇಳೆ 2 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಪೈಕಿ ಶ್ರೇಯಸ್ ಕಶ್ಯಪ್ ಕಂಪನಿಯಿಂದ 40 ಲಕ್ಷ ರೂ. ಲಂಚ ಪಡೆಯುವಾಗ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದರು.
ಉಳಿದಂತೆ ಕ್ರೆಸೆಂಟ್ ರಸ್ತೆಯ ಖಾಸಗಿ ಕಚೇರಿಯಲ್ಲಿ ಮತ್ತೆ 1.60 ಲಕ್ಷ ರೂ. ಪತ್ತೆಯಾಗಿತ್ತು. ಕರ್ನಾಟಕ ಆರೋಮಾಸ್ ಕಂಪೆನಿಯ ಆಲ್ಬರ್ಟ್ ನಿಕೋಲಸ್ ಬಳಿ 45 ಲಕ್ಷ ರೂ. ಮತ್ತು ಗಂಗಾಧರ್ ಬಳಿ 45 ಲಕ್ಷ ರೂ. ಪತ್ತೆಯಾದ ಹಿನ್ನಲೆ ಪ್ರತ್ಯೇಕ ಕೇಸ್ ದಾಖಲಿಸಲಾಗಿದೆ.
ಮತ್ತೊಂದೆಡೆ ಪ್ರಶಾಂತ್ ಮಾಡಾಳ್ ಸಂಬಂಧಿ ಸುರೇಂದ್ರ ಬಳಿ 60 ಲಕ್ಷ ಪತ್ತೆಯಾಗಿತ್ತು. ಹಾಗಾಗಿ ಪ್ರತ್ಯೇಕ ಮತ್ತೆರಡು ಕೇಸ್ ದಾಖಲಿಸಿ ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನು ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರು ನಿನ್ನೆ ಸಂಜೆ ಲೋಕಾಯುಕ್ತ ಕಚೇರಿಗೆ ಹಾಜರಾಗಿ ಸುದೀರ್ಘ ವಿಚಾರಣೆ ಎದುರಿಸಿದ್ದರು. ಶೋಧ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ನಗದು ಹಾಗೂ ಹಲವು ವಿಚಾರಗಳ ಕುರಿತು ತನಿಖಾ ತಂಡ ಶಾಸಕರನ್ನು ವಿಚಾರಣೆಗೊಳಪಡಿಸಿತು.










