ಮುಂದಿನ ಆದೇಶವರೆಗೂ ಬುಲ್ಡೋಜರ್ ಕಾರ್ಯಾಚರಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು : ಸುಪ್ರೀಂ ಕೋರ್ಟ್.

68
firstsuddi

ನವದೆಹಲಿ : ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಕೈಗೊಂಡಿದ್ದ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸುಪ್ರೀಂ ಕೋರ್ಟ್ ನಿನ್ನೆ ಕೂಡ ಈ ದುರುದ್ದೇಶಪೂರಿತ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿತ್ತು.

ಮುಸ್ಲಿಂ ಗಲಭೆ ಆರೋಪಿಗಳ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಜಮೀಯತ್ ಉಲಮಾ-ಇ-ಹಿಂದ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದೆ.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುಜರಾತ್, ಮಧ್ಯಪ್ರದೇಶ ಮತ್ತಿತರರ ಕಡೆ ನಡೆಸಲಾದ ಬುಲ್ಡೋಜರ್ ಕಾರ್ಯಾಚರಣೆಗಳ ಬಗ್ಗೆ ಕೂಡ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡರು. ನ್ಯಾಯಮೂರ್ತಿಗಳು ‘ಸುಪ್ರೀಂ ಕೋರ್ಟಿನಿಂದ ಏನನ್ನು ನಿರೀಕ್ಷಿಸುತ್ತೀರಿ?’ ಎಂದು ಕೇಳಿದಾಗ ದೇಶದಲ್ಲಿ ಕಾನೂನು ಜಾರಿಯಾಗುವಂತಹ ಆದೇಶ ನೀಡಿ. ಬುಲ್ಡೋಜರ್ ದಾಳಿ ಕಾನೂನು ಬಾಹಿರವಾಗಿದೆ. ತಕ್ಷಣವೇ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಲು ಸೂಚಿಸಿ ಎಂದು ಕೇಳಿಕೊಂಡರು.

ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜನವರಿ 19, ಫೆಬ್ರವರಿ 2 ಸೇರಿದಂತೆ ಐದು ಬಾರಿ ಒತ್ತುವರಿ ತೆರವಿನ ಬಗ್ಗೆ ನೊಟೀಸ್ ನೀಡಲಾಗಿದೆ. ನೋಟೀಸ್ ನೀಡಿಯೇ ಬುಲ್ಡೋಜರ್ ಕಾರ್ಯಾಚರಣೆ ಮಾಡಲಾಗಿದೆ. ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡ ಆರೋಪ ಸುಳ್ಳು ಎಂದು ವಾದ ಮಂಡಿಸಿದರು.

ವಾದ, ಪ್ರತಿವಾದ ಆಲಿಸಿದ ಪೀಠ, ಜಹಾಂಗೀರ್ ಪುರಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಅಲ್ಲದೇ ಎಲ್ಲ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿ ಎರಡು ವಾರಗಳಲ್ಲಿ ಉತ್ತರಿಸುವಂತೆ ಹೇಳಿದೆ.