ಮೈಸೂರು: ಮುಡಾ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ ತನಿಖೆ ಬಗ್ಗೆ ನಮಗೆ ಮೊದಲಿನಿಂದಲೂ ಅನುಮಾನ ಇದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ನ್ಯಾಯಾಲಯದ ಗಮನಸೆಳೆಯಲು, ಎಲ್ಲ ರೀತಿಯಾ ದಾಖಲಾತಿಗಳನ್ನ ಸಂಗ್ರಹ ಮಾಡಿಕೊಂಡಿದ್ದೇನೆ ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ತನಿಖೆಯ ಬಗ್ಗೆ ಅನುಮಾನ ಇದೆ. ನಟೇಶ್ ವಿಚಾರಣೆ, ಮಾಜಿ ಮುಡಾ ಅಧ್ಯಕ್ಷ ಧ್ರುವಕುಮಾರ್ ಹೇಳಿಕೆ ಹಾಗೂ ಈ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ನವೆಂಬರ್ 26 ಕ್ಕೆ ನ್ಯಾಯಾಲಯಕ್ಕೆ ಅಗತ್ಯ ದಾಖಲೆ ನೀಡಲಾಗುವುದು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದರಿಂದ, ಈ ತನಿಖೆ ಬಗ್ಗೆ ನಮ್ಮಗೆ ಮೊದಲಿನಿಂದಲೂ ಅನುಮಾನ ಇದೆ. ನಿನ್ನೆ ರಾತ್ರಿ 7.30 ಸಮಯದಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಲೋಕಾಯುಕ್ತ ಕಚೇರಿಗೆ ಬಂದಿರುವ ಮಾಹಿತಿ ಇದೆ. ಒಬ್ಬ ತನಿಖೆ ವೇಳೆ ಅಧಿಕಾರಿಯನ್ನು ಭೇಟಿ ಮಾಡಬಾರದು ಎಂದು ನಿಯಮ ಇಲ್ಲ, ಆದರೆ ಭೇಟಿ ಮಾಡಿರುವ ಸಮಯ ಅನುಮಾನಕ್ಕೆ ಕಾರಣವಾಗಿದೆ. ಲೋಕಾಯುಕ್ತರು ನೋಟಿಸ್ ನೀಡಿದ್ದರಿಂದ ಆಫೀಸ್‍ಗೆ ಬಂದಿದ್ರಾ? ಅಥವಾ ದೂರವಾಣಿ ಕರೆ ಮಾಡಿ ಬಂದಿದ್ರಾ? ಅವರೇ ಸ್ವಯಂ ಪ್ರೇರಿತರಾಗಿ ಬಂದಿದ್ರಾ? ಯಾವ ಉದ್ದೇಶಕ್ಕೆ ಆ ಸಮಯದಲ್ಲಿ ಬಂದಿದ್ದರೂ ಎಂದು ವಿಚಾರಣೆ ಆಗಬೇಕಿದೆ. ನಾನು ಈಗಾಗಲೇ ಲೋಕಾಯುಕ್ತ ಎಸ್.ಪಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.










