ನವದೆಹಲಿ : ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈಗಾಗಲೇ ಕೋ ವ್ಯಾಕ್ಸಿನ್ ಲಸಿಕೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದೀಗ ಸಿದ್ದಗೊಂಡಿರುವ ನಾಸಲ್ ವ್ಯಾಕ್ಸಿನ್ ಮುಂದಿನ ವಾರದೊಳಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ. ಈಗ ಕಂಡು ಬರುತ್ತಿರುವ ಓಮಿಕ್ರಾನ್ ಉಪತಳಿ BF.7 ಗೆ ನಾಸಲ್ ವ್ಯಾಕ್ಸಿನ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.
ಈ ನಾಸಲ್ ಲಸಿಕೆಗೆ ದರ ನಿಗದಿಪಡಿಸುವ ಕಾರ್ಯ ನಡೆಯುತ್ತಿದ್ದು, ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಂದು ಸಂಜೆ ವೇಳೆಗೆ ಈ ನಾಸಲ್ ವ್ಯಾಕ್ಸಿನ್ ಅನ್ನು ಕೋವಿನ್ ಆ್ಯಪ್ ವ್ಯವಸ್ಥೆಗೆ ಸೇರಿಸುವ ಕೆಲಸವಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ನಾಸಲ್ ವ್ಯಾಕ್ಸಿನ್ ಅನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ (CDSCO) ಹಸಿರು ನಿಶಾನೆ ತೋರಿಸಿದ್ದು, ಇದೀಗ ಕೋವಿನ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ. ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಇದು ಲಭ್ಯವಾಗಲಿದ್ದು, ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಲಿದೆ. ಚುಚ್ಚುಮದ್ದಿಗೆ ಹೆದರುವವರಿಗೆ ನಾಸಲ್ ವ್ಯಾಕ್ಸಿನ್ ವರದಾನವಾಗಿದ್ದು, ಉಳಿದ ಲಸಿಕೆಗಳಷ್ಟೇ ಇದು ಪರಿಣಾಮಕಾರಿ ಎಂದು ಹೇಳಲಾಗಿದೆ.










