ಮೂಡಿಗೆರೆ:ಹೆದ್ದಾರಿ ಮಾಡಲು ಬಂದವರು ಕೃಷಿಭೂಮಿ ಬಗೆದರು…

213

ಕೊಟ್ಟಿಗೆಹಾರ: ಮೂಡಿಗೆರೆ ಹ್ಯಾಂಡ್‍ಪೋಸ್ಟ್‍ನಿಂದ ಕೊಟ್ಟಿಗೆಹಾರದವರೆಗೆ ಹಾದು ಹೋಗಿರುವ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಗುತ್ತಿಗೆದಾರರು ರೈತರಿಗೆ ಯಾವುದೆ ಮಾಹಿತಿ ನೀಡದೇ ಹೆದ್ದಾರಿ ಬದಿಯ ಕೃಷಿಭೂಮಿಯ ಒಡಲನ್ನು ಬಗೆಯುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ತಿಗೆರೆ ಸಮೀಪ ಕಿರುಸೇತುವೆ ನಿರ್ಮಾಣ ಮಾಡುವಾಗ ನೀರು ಬಂದ ಕಾರಣ ನೀರನ್ನು ಮೋಟರ್ ಮೂಲಕ ಮೇಲೆತ್ತುವ ಬದಲು ಕೃಷಿಯೋಗ್ಯಭೂಮಿಯನ್ನು ಬಗೆದು ಚರಂಡಿ ನಿರ್ಮಿಸಿದ್ದು ಈ ಬಾರಿಯ ಮಳೆಗಾಲದಲ್ಲಿ ಹೆದ್ದಾರಿಯ ನೀರು ಗದ್ದೆ ಬಯಲಿನ ಮೇಲೆ ಬಂದು ನೂರಾರು ಎಕರೆ ರೈತರ ಅನ್ನದ ಬಟ್ಟಲು ಬರಿದಾಗುವ ಆತಂಕ ಎದುರಾಗಿದೆ.
ಹಿರಿಯ ಕೃಷಿಕರಾದ ಎ.ಬಿ ಕೃಷ್ಣೆಗೌಡ ಮಾತನಾಡಿ ರೈತರಿಗೆ ಮಾಹಿತಿ ಕೊಡದೇ ಹೈವೆ ಅಧಿಕಾರಿಗಳು ಕೃಷಿಯೋಗ್ಯಭೂಮಿಯನ್ನು ಬಗೆದಿರುವುದು ರೈತರ ಅನ್ನಕ್ಕೆ ಮಣ್ಣು ಸುರಿದಂತಾಗಿದೆ. ರೈತರು ಬೆಳೆದ ಆಹಾರದಿಂದಲ್ಲೆ ಬದುಕುತ್ತಿರುವ ಅಧಿಕಾರಿಗಳಿಗೆ ರೈತಾಫಿ ವರ್ಗ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ. ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭವಾದೊಡನೆ ಎಲ್ಲಿ ಮಣ್ಣು ಅಗೆದಿರುತ್ತಾರೋ ಅಲ್ಲೆ ನೀರು ಹೋಗುವುದರಿಂದ ಹೆದ್ದಾರಿ ನೀರು ಗದ್ದೆಯ ಬಯಲಿನ ಮೇಲೆ ಬರುವುದರಿಂದ ಗದ್ದೆಯ ಬದುಗಳು ಜರಿದು ಮುಂದಿನ ವರ್ಷದ ಭತ್ತದ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸಿ ರೈತರ ನೆರವಿಗೆ ಬರಬೇಕು ಎಂದು ತಿಳಿಸಿದ್ದಾರೆ.