ಮೂಡಿಗೆರೆ : ಅಮೂಲ್ಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ…

718

ಮೂಡಿಗೆರೆ : ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಸಿಎಎ ವಿರೋಧಿ ಸಭೆಯಲ್ಲಿ ಅಮೂಲ್ಯ ಎಂಬ ಯುವತಿ ಮೂರು ಬಾರಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನ್ನು ಖಂಡಿಸಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ಅಮೂಲ್ಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಜರಂಗದಳ ಜಿಲ್ಲಾ ಗೋ ರಕ್ಷ್ ಪ್ರಮುಖ್ ಅವಿನಾಶ್ ಅವರು, ಇತ್ತೀಚೆಗೆ ದೇಶ ವಿರೋಧಿ ಚಟುವಟಿಕೆ ಹಾಗೂ ಈ ತರಹದ ಘೋಷಣೆ ಕೂಗುವುದು ಸಾಮಾನ್ಯವಾಗಿದೆ. ಈ ತರಹದ ಸಭೆ ನಡೆಸಲು ರಾಜ್ಯ ಸರ್ಕಾರ ಅವಕಾಶ ನೀಡಬಾರದಿತ್ತು. ಆಕೆಗೆ ತನ್ನ ತಪ್ಪು ಅರಿವಾಗುವಂತಹ ಶಿಕ್ಷೆ ನೀಡಬೇಕು. ದೇಶದ್ರೋಹಿ ಆಕೆಗೆ ಶಿಕ್ಷೆ ಆಗಬೇಕು ಎಂದರು.
ಬಿಜೆಪಿ ಯುವ ಮೋರ್ಚಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಂಜಯ್ ಕೊಟ್ಟಿಗೆಹಾರ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿರುವ ಯುವತಿ ಹಲವು ದಶಕಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮಂತಾಂತರವಾಗಿದ್ದಾಳೆ. ಆಕೆ ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಪಾಕಿಸ್ತಾನ ಪರ ಮಾತನಾಡಿದ್ದಾಳೆ. ಇಂತಹ ವಿಚಿತ್ರ ಮನಸ್ಥಿತಿ ಉಳ್ಳವರನ್ನು ಕೂಡಲೇ ಭಾರತ ದೇಶದಿಂದ ಗಡಿಪಾರು ಮಾಡಬೇಕು ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜನ್ನಾಪುರ ರಘು ಅವರು ಮಾತನಾಡಿ, ಭಾರತ ದೇಶದಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯ ಅನ್ನ ನೀರು ಕುಡಿದು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ಸಾಲುಮರ ಮಹೇಶ್, ಬಜರಂಗದಳ ತಾಲ್ಲೂಕು ಸಂಚಾಲಕರಾದ ವಿನಯ್, ಬಿಜೆಪಿ ಯುವ ಮುಖಂಡ ಪ್ರವೀಣ್ ಪೂಜಾರಿ, ಮಡ್ಡೀಕೆರೆ ಹರ್ಷ, ಸಂತೋಷ್ ಶುಭನಗರ, ಬಾಪುನಗರ ವೆಂಕಟೇಶ್, ಮಧು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.