- ವರದಿ ಪುನೀತ್ ಕಡಿದಾಳ್
ಮೂಡಿಗೆರೆ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಇಂದು ತಾಲ್ಲೂಕಿನ ವಿವಿದೆಡೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ನೆಚ್ಚಿನ ಶಿವಲಿಂಗಕ್ಕೆ ಹೋಮ ಹವನ, ಅಭಿಷೇಕ ಹಾಗೂ ಪೂಜೆ ಮಾಡುವ ಮೂಲಕ ಸಂಭ್ರಮದಿಮದ ಶಿವರಾತ್ರಿಯನ್ನು ಆಚರಿಸಲಾಯಿತು. ಶಿವಭಕ್ತರು ಮಹಾಶಿವರಾತ್ರಿ ಅಂಗವಾಗಿ ವಿಶೇಷ ಕಾರ್ಯಕ್ರಮ, ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಸಂಭ್ರಮದ ಹಬ್ಬಕ್ಕೆ ಸಾಕ್ಷಿಯಾದರು. ತಾಲ್ಲೂಕಿನ ಅನೇಕ ದೇವಾಲಯಗಳಲ್ಲಿ ರಾತ್ರಿಯಿಡೀ ವಿಶೇಷ ಪೂಜೆ, ಅಭಿಷೇಕ, ಭಜನೆ ಜಾಗರಣೆ ನಡೆದವು.
ಹಿಂದೂ ಸಂಪ್ರದಾಯದಲ್ಲಿ ಶಿವ ದೇವರಿಗೆ ವಿಶೇಷವಾದ ಸ್ಥಾನವಿದ್ದು, ಎಲ್ಲಾ ದೇವರುಗಳಿಗಿಂತ ವಿಭಿನ್ನ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಮಡಿ ಮೈಲಿಗೆಗಳಿಗೆ ಆಸ್ಪದವಿಲ್ಲದ ದೇವರು ಶಿವನಾಗಿದ್ದು ಜನಸಾಮಾನ್ರರ ನೆಚ್ಚಿನ ಆರಾಧ್ಯ ದೈವನಾಗಿ ನೆಲೆನಿಂತಿದ್ದಾನೆ ಎಂದರೆ ತಪ್ಪಾಗಲಾರದು. ಸದಾ ಭಸ್ಮಧಾರಿಯಾಗಿದ್ದುಕೊಂಡು, ಕೈಯಲ್ಲಿ ತ್ರಿಶೂಲ ಹಿಡಿದು ಸ್ಮಶಾನವಾಸಿಯಾಗಿ, ಹಾವನ್ನು ಹಾರವನ್ನಾಗಿಸಿಕೊಂಡು ಸದಾ ಧ್ಯಾನಮಗ್ನ ಮುದ್ರೆಯಲ್ಲಿ ಕಾಣಸಿಗುವ ಶಿವ ಶಾಂತ ಸ್ವರೂಪಿಯ ರೂಪವಲ್ಲದೆ ಪ್ರಪಂಚದಲ್ಲಿ ಅನ್ಯಾಯ ಅಕ್ರಮಗಳು ತಲೆ ಎತ್ತಿದಾಗ ಉಗ್ರ ಸ್ವರೂಪಿಯಾಗಿ ಕಾಣಸಿಗುತ್ತಾನೆ. ಹುಲಿಯ ಚರ್ಮವನ್ನು ತನ್ನ ಆಸವನ್ನಾಗಿಸಿಕೊಂಡು ಕೈಲಾಸವಾಸಿಯಾಗಿರುವ ಮಹಾದೇವ ಭಕ್ತಿಯಿಂದ ಬೇಡಿದವರಿಗೆ ಕೂಡಲೇ ಇಷ್ಟಾರ್ಥವನ್ನು ಈಡೇರಿಸುವ ಮೃದು ಮನಸ್ಸಿನ ದೇವ ಎಂದು ಎಲ್ಲಡೆ ಪ್ರಚಲಿತದಲ್ಲಿರುವ ಮಾತು. ಈ ಕಾರಣಕ್ಕಾಗಿಯೇ ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ಹಬ್ಬದಂದು ಜಾತಿ ಮತ ಭೇದವಿಲ್ಲದಂತೆ ಎಲ್ಲರೂ ಒಟ್ಟುಗೂಡಿ ಶಿವನನ್ನು ಆರಾಧಿಸುತ್ತಾರೆ.
ಶಿವರಾತ್ರಿಯ ಶುಭದಿನವಾದ ಇಂದು ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಆರಂಭಗೊಂಡವು. ಹಿಂದಿನ ದಿನವೇ ಬಹುತೇಕ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಶಿವರಾತ್ರಿ ಎಂದರೆ ಬಹುತೇಕರಿಗೆ ನೆನಪಾಗುವುದು ಜಾಗರಣೆ. ಇದರ ಪ್ರಕಾರವಾಗಿ ಪಟ್ಟಣದ ಮೇಗಲಪೇಟೆ, ಹೆಸಗಲ್, ಬಿಳಗುಳ, ಹಳಸೆ, ಹಳೇಮೂಡಿಗೆರೆ, ಬಣಕಲ್, ಗೋಣಿಬೀಡಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಆಯೊಜಿಸಲಾಗಿತ್ತು. ಅದರಲ್ಲೂ ಇತಿಹಾಸ ಪುರಾಣ ಪ್ರಸಿದ್ಧವಾದ ದೇವವೃಂದದ ರಾಮೇಶ್ವರ ದೇವಾಲಯದಲ್ಲಿ ವಿಜೃಂಭಣೆಯ ಪೂಜೆಗಳು ಎಲ್ಲರ ಮನಸೂರೆಗೊಂಡವು. ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾತ್ರಿಯಿಡೀ ಭಕ್ತರ ಜಾಗರಣೆ ಭಜನೆಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಲಿಂಗಾಯಿತ ಸಮುದಾಯಗಳ ಮನೆಗಳಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿ ಶಿವ ಬೀಜಾಕ್ಷರ ಮಂತ್ರಗಳ ಪಠಣೆ, ಲಿಂಗ ಪೂಜೆ, ಬಿಲ್ವಪತ್ರೆ ಸಹಸ್ರ ಅರ್ಚನೆ, ಅಭಿಷೇಕಗಳು ನಡೆದವು.

ತಾಲ್ಲೂಕಿನ ಕಡಿದಾಳು ಸೋಮಲಿಂಗೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಸಂಭ್ರಮ ಸಡಗರದಿಂದ ಶಿವರಾತ್ರಿ ಹಬ್ಬವನ್ನು ಆಚರಿಸಿದರು. ದೇವಾಲಯದಲ್ಲಿ ಬೆಳಗ್ಗೆ ಶಿವಲಿಂಗಕ್ಕೆ ಕ್ಷೀರಾಭಿಷೇಕ, ಗಂಧಾಭಿಷೇಕ, ಭಸ್ಮಾಭಿಷೇಕ, ಕುಂಕುಮಾರ್ಚನೆ, ವಿವಿಧ ಬಗೆಯ ಹೂವುಗಳಲ್ಲಿ ದೇವರಿಗೆ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಶಿವಧ್ಯಾನ ಮಾಡುವ ಮೂಲಕ ಶಿವನ ಕೃಪಡಗೆ ಪಾತ್ರರಾದರು.
ಶಿವರಾತ್ರಿ ಹಬ್ಬಕ್ಕೆ ಹುರಿಹಿಟ್ಟು ಉಂಡೆ : ಶಿವರಾತ್ರಿ ಹಬ್ಬದಂದು ಬೆಳಗ್ಗಿನಿಂದಲೇ ಉಪವಾಸವಿರುವ ಜನರು ಶಿವನ ಆರಾಧನೆಯನ್ನು ಭಯ-ಭಕ್ತಿ-ಪ್ರೀತಿಯಿಂದ ನಡೆಸುತ್ತಾರೆ. ಉಪವಾಸದ ವೇಳೆ ಊಟ-ತಿಂಡಿಗಳಿಗೆ ಅವಕಾಶ ಇಲ್ಲದಿರುವುದರಿಂದ, ಕೇವಲ ಹಣ್ಣು ಹಂಪಲು, ರಾಗಿ, ಸಾಮೆ, ಗೋಧಿ ಬಳಕೆ ಮಾಡಲಾಗುತ್ತದೆ. ಅಕ್ಕಿಯನ್ನು ಈ ಸಂದರ್ಭದಲ್ಲಿ ಬಳಸದೆ ಇದ್ದರೂ ಸಹ ಹಬ್ಬಕ್ಕೆ ವಿಶೇಷವಾಗಿ ತಯಾರಿಸಿದ ಅಕ್ಕಿಹಿಟ್ಟು-ಬೆಲ್ಲ-ನೆಲಗಡಲೆ ಮಿಶ್ರಿತ ಹುರಿಹಿಟ್ಟಿನ ಉಂಡೆ ಈ ಹಬ್ಬದ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು.










