ಮೂಡಿಗೆರೆ : ಆಲೇಕಾನ್ ಗ್ರಾಮದಲ್ಲಿ ಕಾಡಾನೆ ದಾಳಿ-ಅಪಾರ ಪ್ರಮಾಣದ ಬೆಳೆಹಾನಿ…

225
firstsuddi

ಕೊಟ್ಟಿಗೆಹಾರ : ಆಲೇಕಾನ್ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.
ಸುಮಾರು 20 ಕ್ಕೂ ಹೆಚ್ಚು ಕಾಡಾನೆಗಳು ಕೃಷಿಭೂಮಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡಿದೆ. ಆಲೇಕಾನ್ ಗ್ರಾಮದ ಸಂದೀಪ್, ಸುರೇಶ್‍ಗೌಡ, ಗಿರೀಶ್, ನಾರಾಯಣಗೌಡ ಮೊದಲಾದ ರೈತರ ನೂರಾರು ಕಾಫಿಗಳನ್ನು ತುಳಿದು ಹಾಕಿದ್ದು ಅಡಿಕೆ ಮರಗಳನ್ನು ಸಿಗಿದು ಹಾಕಿದೆ. ಏಲಕ್ಕಿ ಗಿಡಗಳು ಮಣ್ಣು ಪಾಲಾಗಿದ್ದು ಬಾಳೆಗಿಡಗಳನ್ನು ಸಿಗಿದು ಹಾಕಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಲೇಕಾನ್ ಗ್ರಾಮಸ್ಥ ಸುರೇಶ್‍ಗೌಡ, ಮೀಸಲು ಅರಣ್ಯ ನಡುವೆ ಇರುವ ಆಲೇಕಾನ್ ಗ್ರಾಮದಲ್ಲಿ ಪ್ರತಿ ವರ್ಷವೂ ಕಾಡಾನೆ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ಇಲ್ಲಿನ ಕೃಷಿಭೂಮಿಯನ್ನು ಪಡೆದು ಬೇರೆಡೆ ಜಾಗವನ್ನು ನೀಡಬೇಕು. ಕಾಡಾನೆ ಹಾವಳಿ ತಡೆಗೆ ಮಾಡಿರುವ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಇಲ್ಲಿನ ಕೃಷಿಕರಿಗೆ ಬೇರೆಡೆ ಜಾಗ ನೀಡುವುದು ಮಾತ್ರ ಇದಕ್ಕೆ ಪರಿಹಾರ ಎಂದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಆಲೇಕಾನ್ ಗ್ರಾಮಸ್ಥರ ಕಾಡಾನೆ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಸರ್ಕಾರದ ನಿಗದಿತ ಬೆಲೆ ನೀಡಿ ಅರಣ್ಯ ಇಲಾಖೆ ಪಡೆದುಕೊಳ್ಳುವ ಬಗ್ಗೆ ಅವಕಾಶಗಳಿದ್ದು ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿದರೆ ಈ ಬಗ್ಗೆ ಚಿಂತಿಸಿ ಕ್ರಮ ಕೈಗೊಳ್ಳಬಹುದು ಎಂದರು.