ಮೂಡಿಗೆರೆ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದರೂ ಸಹ ಜನ ಮಾತ್ರ ಯಾವುದಕ್ಕೂ ತಲೆಕಡಿಸಿಕೊಳ್ಳುತ್ತಿರುವ ಲಕ್ಷಣ ಕಾಣುತ್ತಿಲ್ಲ. ರಾಜ್ಯ ಸರ್ಕಾರವು ಬೆಳಗ್ಗೆ ಆರರಿಂದ ಹತ್ತು ಗಂಟೆಗಳವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಖರೀದಿಯ ಮಧ್ಯದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಜನರು ಪಾಲಿಸುತ್ತಿಲ್ಲ.
ದಿನ ಕಳೆದಂತೆ ಬೆಳಗ್ಗಿನಿಂದಲೇ ಪಟ್ಟಣದಲ್ಲಿ ಜನಗುಂಗುಳಿ ಜಾಸ್ತಿಯಾಗುತ್ತಿದ್ದು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಪಟ್ಟಣಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಅದರಲ್ಲಿಯೂ ಕೆಲವೇ ಕೆಲವು ಸಾರ್ವಜನಿಕರು ಈ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಮನೆಗಳಲ್ಲಿಯೇ ಉಳಿದು ಕಾನೂನು ಪಾಲನೆ ಮಾಡುತ್ತಿರುವ ಜನರಿಗೆ ತೀವ್ರ ನಿರಾಶೆ ಹಾಗೂ ಆತಂಕ ಉಂಟು ಮಾಡಿದೆ.
ಮಾಸ್ಕ್ ಧಾರಣೆ ನೆಪಕ್ಕೆ ಮಾತ್ರ ಎನ್ನುವಂತಿದ್ದು ಮೂಗಿನ ಕೆಳಗಿನವರೆಗೂ ಮಾತ್ರ ಮಾಸ್ಕ್ ಧಾರಣೆ ಮಾಡುತ್ತಿರುವ ಹಲವರು, ಸಾಮಾಜಿಕ ಅಂತರಕ್ಕೆ ಯಾವುದೇ ಮನ್ನಣೆ ನೀಡುತ್ತಿಲ್ಲ. ಸಿಕ್ಕ ಸಮಯದಲ್ಲಿಯೇ ಕನಿಷ್ಟ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಕ್ಕಪಕ್ಕದಲ್ಲಿಯೇ ಕುಳಿತು ಉಭಯಕುಶಲೋಪರಿ ಮಾತನಾಡಿಕೊಳ್ಳುವ ಜನರಿಗೇನು ಕಡಿಮೆ ಇಲ್ಲ ಬೆಳಗ್ಗೆ ಏಳು ಗಂಟೆಯ ನಂತರ ಪಟ್ಟಣದ ರಸ್ತೆಗಳಲ್ಲಿ ವಾಹನ ದಟ್ಟಣೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದು, ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹಲವು ದೂರುಗಳು ಕೇಳಿ ಬರುತ್ತಿವೆ.
ಇತ್ತ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಹಗಲಿರುಳು ಎನ್ನದಂತೆ ಕೊರೋನಾ ಅಬ್ಬರಕ್ಕೆ ಬ್ರೇಕ್ ಹಾಕಲು ಹರಸಾಹಸ ಪಡುತ್ತಿದ್ದು. ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿವೆ. ಕೊರೋನಾ 2ನೇ ಅಲೆಯ ಅಬ್ಬರವನ್ನು ಕಟ್ಟಿಹಾಕಲು ರಾಜ್ಯ ಸರ್ಕಾರವು ಕಠಿಣ ನಿಯಮಗಳ ಜೊತೆಗೆ ಜನತಾ ಕಫ್ರ್ಯೂವನ್ನು ಜಾರಿಗೆ ತಂದಿದ್ದರೂ ಸಹ ಕೆಲವೇ ಕೆಲವು ಸಾರ್ವಜನಿಕರ ಅಸಡ್ಡೆಯಿಂದಾಗಿ ತಾಲ್ಲೂಕಿನ ಜನತೆ ಆತಂಕದಲ್ಲಿ ದಿನ ದೂಡುವಂತಾಗಿದೆ. ಇನ್ನು ಜನರಿಗೆ ಬುದ್ಧಿ ಹೇಳಬೇಕಾಗಿದ್ದ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಸರಿಗೆ ಮಾತ್ರ ಮಾಸ್ಕ್ ಧಾರಣೆ ಮಾಡಿ ಸಾಮಾಜಿಕ ಅಂತರವಿಲ್ಲದೆ ನಗರ ಪ್ರದಕ್ಷಿಣೆ ಹಾಕಿ ಹುಬ್ಬೇರುವಂತೆ ಮಾಡಿದ್ದಾರೆ.
ಮೂರು ದಿನಗಳಿಗೆ ಒಮ್ಮೆ ಹಣ್ಣು ತರಕಾರಿಗಳನ್ನು ಹಾಗೂ ತಿಂಗಳಿಗೆ ಒಮ್ಮೆ ದಿನಸಿ ಸಮಾನುಗಳನ್ನು ಖರೀದಿ ಮಾಡುವುದು ಸಾರ್ವಜನಿಕರು ಒಟ್ಟಾಗುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಡಾ. ಸಂತೋಷ್ ಅವರು, ಕೊರೋನಾ ಸೋಂಕಿನ ಎರಡನೇ ಅಲೆ ಎಲ್ಲರೂ ಅಂದುಕೊಂಡಷ್ಟು ಸಮಾನ್ಯವಾಗಿಲ್ಲ. ಪ್ರತೀ ನಿತ್ಯ ಸಾವುಗಳನ್ನು ಕಂಡರೂ ಸಹ ಬೇಜವಾಬ್ದಾರಿಯಿಂದ ಸುಮ್ಮನೆ ತಿರುಗಾಡುವುದು ಶ್ರೇಯಸ್ಸಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.
ಒಟ್ಟಾರೆ ಎಲ್ಲಾ ತೊಂದರೆಗೆ ಶನೀಶ್ವರ ಕಾರಣ ಎಂಬಂತೆ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಹಾಕಿ ಕನಿಷ್ಟ ಜವಾಬ್ದಾರಿನ್ನೂ ಸಹ ನಿರ್ವಹಿಸದ ಸಾರ್ವಜನಿಕರು ಕೂಡಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮೂಡಿಗೆರೆ ಜನತೆ ತೀವ್ರ ತೊಂದರೆಗ ಒಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ.










