ಬಣಕಲ್: ಬಣಕಲ್ ಮಾರ್ಗವಾಗಿ ಬೆಟ್ಟಗೆರೆಗೆ ಹೋಗುವ ರಸ್ತೆಯು ಚೇಗು ಗ್ರಾಮದ ಸೇತುವೆ ಸಮೀಪ ಸಂಪೂರ್ಣ ಕೆಸರುಮಯವಾಗಿದ್ದು ರಸ್ತೆ ದುರಸ್ಥಿ ಮಾಡುವಂತೆ ಚೇಗು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥ ಜಗದೀಶ್ ನೇಸರ ಮಾತನಾಡಿ ಕಳೆದ ವರ್ಷದ ಮಳೆಗಾಲದಲ್ಲಿ ನೆರೆಯಿಂದಾಗಿ ಚೇಗು ಗ್ರಾಮದ ಸೇತುವೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತವಾಗಿತ್ತು. ಮಳೆಗಾಲ ಕಳೆದ ನಂತರ ತಾತ್ಕಾಲಿಕವಾಗಿ ಸಿಮೆಂಟ್ ರಿಂಗ್‍ಗಳನ್ನು ಹಾಕಿ ಮೇಲೆ ಮಣ್ಣು ಹಾಕಲಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸೇತುವೆಯ ಮೇಲ್ಬಾಗ ಸಂಪೂರ್ಣ ಕೆಸರುಮಯವಾಗಿದ್ದು, ಈ ಮಾರ್ಗವಾಗಿ ಸಂಚರಿಸುವುದೆ ದುಸ್ತರವಾಗಿದೆ. ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಾರ್ಗವಾಗಿ ದಿನನಿತ್ಯ ತೋಟ ಕಾರ್ಮಿಕರು, ಮಕ್ಕಳು ಸಂಚರಿಸುತ್ತಿರುತ್ತಾರೆ. ಬಾಡಿಗೆ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಸ್ತೆ ಅವ್ಯವಸ್ಥೆಯಿಂದಾಗಿ ಬಾಡಿಗೆ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಕಳೆದ ಬಾರಿ ಸೇತುವೆ ಕುಸಿದ ಜಾಗದಲ್ಲಿ ನೂತನ ಸೇತುವೆ ಇನ್ನೂ ನಿರ್ಮಾಣವಾಗಿಲ್ಲ. ತಾತ್ಕಾಲಿಕ ಸೇತುವೆ ಈ ಬಾರಿ ಕೊಚ್ಚಿ ಹೋಗುವ ಸಾದ್ಯತೆ ಇದ್ದು ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.










