ಮೂಡಿಗೆರೆ: ಉದ್ಯೋಗಖಾತ್ರಿ ಯೋಜನೆಯಲ್ಲಿ ಕಾಫಿ ತೋಟದ ಅಭಿವೃದ್ಧಿ ಕೆಲಸ ನಿರ್ವಹಿಸುವಂತಿರಲಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಹಾಗೂ ನನ್ನ ಪ್ರಯತ್ನದಿಂದ ಸಣ್ಣ ಹಿಡುವಳಿದಾರರ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳ ಖಾಲಿ ಜಮೀನಿನಲ್ಲಿ ಕಾಫಿ ಗಿಡ ನೆಟ್ಟು ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರ ಗ್ರೀನ್‍ಸಿಗ್ನಲ್ ನೀಡಿದೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ತಿಳಿಸಿದರು.
ಇಂದು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ಎಕರೆ ಜಮೀನಿನಲ್ಲಿ 444 ರೋಬಸ್ಟಾ ತಳಿಯ ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿಸಲು 77 ಕಾರ್ಮಿಕರು ಕೆಲಸ ನಿರ್ವಹಿಸಬಹುದು. ಅದಕ್ಕೆ 28.585 ರೂ ಅನುದಾನ, ಅರೇಬಿಕಾ ಕಾಫಿ 1 ಎಕರೆಗೆ 1728 ಗಿಡ ನೆಡಬಹುದು. 253 ಮಂದಿ ಕಾರ್ಮಿಕರ ಕೆಲಸಕ್ಕೆ ತಲಾ90.313.ರೂ ಅನುದಾನ ಕೇಂದ್ರ ಸರಕಾರ ನೀಡಲಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನ 24 ಸರಕಾರಿ ಪ್ರಾಥಮಿಕ ಕಟ್ಟಡಕ್ಕೆ ಬಣ್ಣ ಬಳಿದು ಚಿತ್ರ ಬಿಡಿಸಲು ತಾ.ಪಂ.ನಿಂದ 21.25 ಲಕ್ಷ, 100ಕ್ಕಿಂತ ಹೆಚ್ಚು ವಿದ್ಯಾರ್ಥಿ ಇರುವ 7 ಪ್ರೌಡಶಾಲೆಗಳಿಗೆ 7 ಲಕ್ಷ ಅನುದಾನದಲ್ಲಿ ಬಣ್ಣ ಬಳಿದು ಚಿತ್ರ ಬಿಡಿಸಲಾಗಿದೆ. ತಾಲೂಕಿನ 17 ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್‍ಕ್ಲಾಸ್ ತರಬೇತಿ ಆರಂಭಿಸಲಾಗುವುದು. 45 ಶಾಲೆಗಳ ಕಾಂಪೌಂಡ್ ಕಾಮಗಾರಿ ಸಂಪೂರ್ಣ ಮುಗಿದಿದೆ ಎಂದು ತಿಳಿಸಿದರು.
ತಾಲೂಕಿನ 29 ಗ್ರಾ.ಪಂ.ಗಳ ಪೈಕಿ 20 ಗ್ರಾ.ಪಂ.ಗೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಗ್ರಾ.ಪಂ.ಗೂ ಒಂದೊಂದು ಟ್ಯಾಂಕರ್ ಖರೀದಿಸಲಾಗಿದೆ. ಅಗತ್ಯ ಸಂದರ್ಭದಲ್ಲಿ ಕುಡಿಯುವ ನೀರಿಗೆ ಟ್ಯಾಂಕ್‍ನ್ನು ಬಳಸಲು ಸೂಚಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಳೆ ಕಚೇರಿಯನ್ನು ವಾಣಿಜ್ಯ ಮಳಿಗೆಯಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ 20 ಲಕ್ಷ ಮೀಸಲಿರಿಸಲಾಗಿದೆ. ಕೇಂದ್ರ ಸರಕಾರದಿಂದ ತಾ.ಪಂ.ಗೆ ಬಂದ ಪ್ರಶಸ್ತಿಯ 5 ಲಕ್ಷ ಹಣ ಬಳಸಿ ತಾ.ಪಂ. ಕಚೇರಿಯಲ್ಲಿ ಸಭಾಭವನವೊಂದನ್ನು ನಿರ್ಮಿಸಲಾಗುವುದು. ತಾಲೂಕಿನ ಹೆಸಗಲ್, ಬಿಳಗುಳ ಸೇರಿದಂತೆ 35 ಗ್ರಾಮಗಳ ಹಿಂದೂ ರುದ್ರಭೂಮಿಯಲ್ಲಿ ತಲಾ 4.5 ಲಕ್ಷ ಅನುದಾನ ಬಳಸಿ ಚಿತಾಗಾರ ನಿರ್ಮಿಸಲಾಗಿದೆ. ಗ್ರಾ.ಪಂ.ಯ ನಿರ್ಣಯವನ್ನು ರದ್ದುಪಡಿಸುವ ಅಧಿಕಾರವನ್ನು ಸರಕಾರ ತಾ.ಪಂ.ಗೆ ನೀಡಿದೆ ಎಂದು ಹೇಳಿದರು.
ತಾ.ಪಂ. ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಸುಂದರ್ ಕುಮಾರ್, ಭಾರತೀ ರವಿಂದ್ರ, ಕಿರಗುಂದ ಗ್ರಾ.ಪಂ. ಸದಸ್ಯ ರಮೇಶ್ ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಉದ್ಯೋಗ ಖಾತ್ರಿಯಲ್ಲಿಯೂ ಕಾಫಿ ಗಿಡ ನೆಟ್ಟು ಅಭಿವೃದ್ಧಿಪಡಿಸಬಹುದು: ಕೆ.ಸಿ.ರತನ್ ಕುಮಾರ್.










