ಮೂಡಿಗೆರೆ : ಜಗತ್ತಿನಲ್ಲಿ ಆರೋಗ್ಯಕ್ಕಿಂತ ಮಿಗಿಲಾದ ಮಹಾ ಭಾಗ್ಯ ಬೇರೊಂದಿಲ್ಲ. ಇದನ್ನು ಮೀರಿಸುವ ಸಂಪತ್ತು ಜಗತ್ತಿನಲ್ಲಿಲ್ಲ ಎಂದು ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಎಲ್.ಸುಂದ್ರೇಶ್ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಮಹಾತ್ಮ ಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನು ಹಣ ಸಂಪಾದಿಸುವ ಭರದಲ್ಲಿ ತನ್ನ ಕುಟುಂಬ ಹಾಗೂ ಆರೋಗ್ಯವನ್ನು ಕಡೆಗಣಿಸುತ್ತಿದ್ದಾನೆ. ಇದರ ಪರಿಣಾಮ ತನ್ನ ಜೀವಿತದ ಅವಧಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ತಾನು ಜೀವನಪೂರ್ತಿ ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಕಳೆದು ಮರಳಿ ಆರೋಗ್ಯ ಪಡೆಯಲು ಪ್ರಯತ್ನಿಸುತ್ತಾನೆ. ಆದುದರಿಂದ ಯಾವುದೇ ವ್ಯಕ್ತಿಯಾದರೂ ತನ್ನ ಹಾಗೂ ತನ್ನ ಕುಟುಂಬದವರ ಆರೋಗ್ಯದ ಕುರಿತು ಜಾಗೃತೆ ವಹಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಆಶ್ರಯ ಆಸ್ಪತ್ರೆ ಹೃದಯರೋಗ ತಜ್ಞ ಡಾ.ಅನಿಕೇತ್ ವಿಜಯ್ ಅವರು ಮಾತನಾಡಿ, ಇಂದಿನ ಆಧುನಿಕ ಜೀವನದಲ್ಲಿ ಬಹುತೇಕರು ಹೃದಯ ತೊಂದರೆಯನ್ನು ನಿರ್ಲಕ್ಷ್ಯ ಮಾಡಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಕನಿಷ್ಟ 40 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದು. ಇಂತಹ ಅರೋಗ್ಯ ತಪಾಸಣೆಯಲ್ಲಿ ಎಲ್ಲಾ ರೀತಿಯ ತಪಾಣೆಗಳು ಒಳಗೊಂಡಿದ್ದರೆ ಒಳ್ಳೆಯದು. ಮಾನವನ ದೇಹದಲ್ಲಿ ಪ್ರತೀಯೊಂದು ಅಂಗಗಳು ಒಂದಕ್ಕೊಂದು ಪೂರಕವಾಗಿ ಹೊಂದಿಕೊಂಡು ಕೆಲಸ ಮಾಡುತ್ತಿರುತ್ತವೆ. ಯಾವುದೇ ಅಂಗಕ್ಕೆ ತೊಂದರೆಯಾದರೂ ಕಷ್ಟ ಅನುಭವಿಸುವುದು ತಾವುಗಳೇ ಆಗಿರುವುದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರ ಅಗತ್ಯ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಅವರು ಮಾತನಾಡಿ, ‘ ಆರೋಗ್ಯವಂತ ನಾಗರೀಕನು ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತಾನೆ’. ಇದನ್ನು ಮೂಲ ಉದ್ದೇಶವನ್ನಾಗಿಸಿಕೊಂಡು ‘ಸರ್ವರಿಗೂ ಆರೋಗ್ಯ’ ಎಂಬ ಘೋಷವಾಕ್ಯದೊಂದಿಗೆ ಪ್ರತೀ ವರ್ಷವೂ ಉಚಿತ ಆರೋಗ್ಯ ತಪಾಸಣೆ , ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಲಯನ್ಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇಂಥಹ ಶಿಬಿರಗಳಲ್ಲಿ ನುರಿತ ವೈದ್ಯರುಗಳು ಭಾಗವಹಿಸುವುದರಿಂದ ಫಲಿತಾಂಶದ ವರದಿ ವಸ್ತುನಿಷ್ಠವಾಗಿರುತ್ತದೆ. ಎಲ್ಲರೂ ಇಂಥಹ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ಆಶ್ರಯ ಆಸ್ಪತ್ರೆಯ ವೈದ್ಯರುಗಳಾದ ಹೃದಯ ತಜ್ಞ ಡಾ.ಅನಿಕೇತನ್, ಉದರ ಸಂಬಂಧಿ ರೋಗಗಳ ತಜ್ಞ ಡಾ.ವಿ.ಜಿ.ಶ್ರೀರಾಮ್, ಮೂತ್ರಕೋಶ ತಜ್ಞ ಡಾ.ಕಾರ್ತಿಕ್, ಮಕ್ಕಳ ತಜ್ಞೆ ಡಾ.ಅಶ್ವಿನಿ ಅನಿಕೇತ್, ಪ್ರನಾಳ ಶಿಶು ತಜ್ಞೆ ಡಾ.ಭಾಗ್ಯ ಕಾರ್ತಿಕ್ ಅವರುಗಳು ಶಿಬಿರದಲ್ಲಿ ಪಾಲ್ಗೊಂಡಿದ್ದ 600ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಿದರು. ಮಾಜಿ ಶಾಸಕ ಬಿಬಿ ನಿಂಗಯ್ಯ ಅವರು ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್, ಪದಾಧಿಕಾರಿಗಳಾದ ಗೋಪಾಲ ಗೌಡ, ಡಿ.ಎಲ್.ಅಶೋಕ್ ಕುಮಾರ್, ಹಳೇಕೋಟೆ ರಮೇಶ್, ಜಗಮೋಹನ್, ಪಿ.ಬಿ.ಚಂದ್ರಶೇಖರ್ ಅವರಗಳು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಜಗತ್ತಿನಲ್ಲಿ ಆರೋಗ್ಯಕ್ಕಿಂತ ಮಿಗಿಲಾದ ಮಹಾ ಭಾಗ್ಯ ಬೇರೊಂದಿಲ್ಲ : ಎನ್.ಎಲ್.ಸುಂದ್ರೇಶ್.










