ಮೂಡಿಗೆರೆ : ಯಾವುದೇ ಕಾರ್ಯಗಳನ್ನು ಮಾಡಬೇಕಾದರೂ ಮನಸ್ಸು ಪ್ರಮುಖವಾದ ಸಾಧನವಾಗಿದೆ : ಡಿ.ಎಸ್.ರವಿ.

454
firstsuddi

ಮೂಡಿಗೆರೆ : ಯಾವುದೇ ಮನುಷ್ಯನು ಆಶಾವಾದಿಯಾಗಿರಬೇಕು, ತನ್ನಲ್ಲಿರುವ ಕೀಳರಿಮೆಯನ್ನು ಬೇರುಸಮೇತವಾಗಿ ಕಿತ್ತುಹಾಕಬೇಕು. ಇಲ್ಲವಾದಲ್ಲಿ ಅದು ತಮ್ಮ ಜೀವನವನ್ನೇ ಹಾಳುಗೆಡವಬಲ್ಲುದು ಎಂದು ರೋಟರಿ ಸಂಸ್ಥೆ ಜಿಲ್ಲಾ ಮಾಜಿ ಗವರ್ನರ್ ಡಿ.ಎಸ್.ರವಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ‘ಪಿಯು ನಂತರ ಮುಂದೇನು?’ ಎನ್ನುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕಾರ್ಯಗಳನ್ನು ಮಾಡಬೇಕಾದರೂ ಮನಸ್ಸು ಪ್ರಮುಖವಾದ ಸಾಧನವಾಗಿದೆ. ಇಂಥಹ ಮನಸ್ಸು ಸ್ಥೀಮಿತದಲ್ಲಿ ಇಲ್ಲದೆ ಸದಾ ಆತಂಕದಿಂದ ಕೂಡಿದ್ದರೆ ಯಾವುದೇ ಕಾರ್ಯ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಸಾಧನೆಗೆ ಮಾರ್ಗದರ್ಶನ ಅಗತ್ಯ, ಇದರ ಜೊತೆಯಲ್ಲಿ ಅನುಭವಿಗಳ ಸಲಹೆ ಸೂಚನೆಗಳು ಜೀವನದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಬಲ್ಲುದು. ಮನಸ್ಸಿಗೆ ಸಂತೋಷ ಉಂಟು ಮಾಡುವಂಥಹ ಹಾಗೂ ಸಕಾರಾತ್ಮಕ ಯೋಚನೆಗಳಿಗೆ ಪೂರಕವಾದಂಥಹ ಅಂಸಗಳನ್ನು ಗಮನಿಸುತ್ತಿರುವುದು ಸೂಕ್ತ. ಇಲ್ಲವಾದಲ್ಲಿ ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಆಳುವ ಅಪಾಯವಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಜೀವನ್ ಅವರು ಮಾತನಾಡಿ, ರೋಟರಿ ಸಂಸ್ಥೆಯು ಅಡ್ಯಂತಾಯ ಕುಟುಂಬದ ನೆರವಿನಲ್ಲಿ ಎರಡು ದಶಕಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನ ನೀಡುತ್ತಾ ಬರುವುದರ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಮುಂದಿನ ಭವಿಷ್ಯದ ನಿರ್ಧಾರಗಳ ಬಗ್ಗೆ ಸಹಜವಾಗಿ ಆತಂಕಕ್ಕೆ ಒಳಗಾಗುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ನಡೆಸಿಕೊಡುವುದರ ಮೂಲಕ ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಪಿಯುಸಿ ನಂತರ ತೆಗೆದುಕೊಳ್ಳುವ ಹೆಜ್ಜೆಯು ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸೂಕ್ತ ಮಾರ್ಗದರ್ಶನದೊಂದಿಗೆ ಅತ್ಯುತ್ತಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.
ನಂತರ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಮಂಜುಳಾ ಅವರು ಮಾತನಾಡುತ್ತಾ, ನಾವುಗಳು ಕೈಗೊಳ್ಳುವ ನಿರ್ಧಾರಗಳು ನಮ್ಮ ಉತ್ತಮ ಜೀವನವನ್ನು ರೂಪಿಸುವಂತೆ ಇರಬೇಕು. ಶೈಕ್ಷಣಿಕ ಪಯಣದಲ್ಲಿ ಎರಡನೇ ಬಾರಿಗೆ ಆಯ್ಕೆಗೆ ಅವಕಾಶ ಇರುವುದಿಲ್ಲ. ಇತರೆ ವಿಷಯಗಳಲ್ಲಿ ಪದೇ ಪದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನಿರ್ಧಾರಗಳನ್ನು ಬದಲಿಸುವ ಬುದ್ಧಿಯನ್ನು ಬಿಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ದುಂಡುಗ ಪ್ರಮೋದ್, ಸಮುದಾಯ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಹೆಚ್.ಕೆ ಯೋಗೇಶ್ ಅವರುಗಳು ಮಾತನಾಡಿದರು. ಪಿಯುಸಿ ನಂತರದ ಕೈಗೊಳ್ಳಬಹುದಾದ ಉದ್ಯೋಗ ಅವಕಾಶಗಳು ಹಾಗೂ ಪಿಯುಸಿ ನಂತರವಿರುವ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ವಾಸುದೇವ್ ಅವರು ಕಾರ್ಯಾಗಾರ ನಡಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಕಾಲೇಜಿನ ಪ್ರಾಧ್ಯಾಪಕರುಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.