ಮೂಡಿಗೆರೆ : ವಿಧಾನ ಪರಿಷತ್ ಸದಸ್ಯರು, ಅವರ ಕುಟುಂಬಸ್ಥರು ಹಾಗೂ ಕಾರಿನ ಡ್ರೈವರ್ ಸಾರಿದಂತೆ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ಹಾಗೂ ಭಾನುವಾರದಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿದ್ದರಿಂದ ತಾಲ್ಲೂಕಿನ ರೈತರು ಹಾಗೂ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.
ತಾಲ್ಲೂಕಿನ ರಾಜಕೀಯ ಧುರೀಣರೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ಒಂದೆಡೆಯಾದರೆ, ಇದೇ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡ ಜಿಲ್ಲಾ ಉಸ್ತವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಸೋಂಕಿತ ನಾಯಕರೊಂದಿಗೆ ನೇರ ಸಂಪರ್ಕದಲ್ಲಿ ಇದ್ದುದರಿಂದ ತಾಲ್ಲೂಕಿನಾದ್ಯಂತ 300 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕಾರ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ತಾಲ್ಲೂಕು ಕಛೇರಿಯ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕ್ವಾರಂಟೈನ್ ಕೆಲಸಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ತಾಲ್ಲೂಕು ಕಛೇರಿಯಲ್ಲಿ ಸಿಬ್ಬಂದಿಗಳು ಇಲ್ಲದೆ ಬಹುತೇಕ ಕಾರ್ಯಗಳು ಸ್ಥಬ್ಧವಾಗಿದೆ.
ಜುಲೈ-10 ರ ಒಳಗೆ ಬೆಳೆ ವಿಮೆ ಪಾವತಿ ಮಾಡಲು ಕೊನೆಯ ದಿನಾಂಕವಾಗಿದ್ದು, ಅಗತ್ಯ ದಾಖಲೆಗಳನ್ನು ಪಡೆಯಲು ರೈತರು ತಾಲ್ಲೂಕು ಕಛೇರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ವಾರಂಟೈನ್ ಕೆಲಸದಲ್ಲಿ ನಿರತರಾಗಿರುವುದರಿಂದ ರೈತರಿಗೆ ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲಕ್ಕೂ ಮೂಲ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಲಾಕ್‍ಡೌನ್ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡಿರುವುದು ಎನ್ನುವುದು ಬಹುತೇಕ ರೈತರ ಕೋಪಕ್ಕೆ ಕಾರಣವಾಗಿದೆ.
ಈ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಅವರು, ಜೂ.29ರಂದು ತಾ.ಪಂ.ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸೋಂಕಿತ ವಿ.ಪ ಸದಸ್ಯರು ಪಾಲ್ಗೊಂಡಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಹೋಂ ಕ್ವಾರಂಟೈನ್ ಮಾಡಿರುವದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಲಾಕ್‍ಡೌನ್ ಅವಧಿಯಲ್ಲಿ ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿರುವುದು ನೇರವಾಗಿ ಕಂಡುಬರುತ್ತಿದೆ. ಸಚಿವರು, ಶಾಸಕರಾದ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಜನಸಾಮಾನ್ಯರಿಗೊಂದು ಕಾನೂನು, ಜನನಾಯಕರಿಗೊಂದು ಕಾನೂನು ಎಂದು ನಡೆದುಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇವರ ನಡವಳಿಕೆಯಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೋಪ ವ್ಯಕ್ತಪಡಸಿದರು.
ತಾಲ್ಲೂಕು ಆಡಳಿತದ ಮಾಹಿತಿಯ ಪ್ರಕಾರ ಮೂಡಿಗೆರೆ ಪಟ್ಟಣ, ದೇವರಮನೆ, ತ್ರಿಪುರಾ, ಗುತ್ತಿ, ದುರ್ಗದಹಳ್ಳಿ, ಬಣಕಲ್, ಬಡವನ ದಿಣ್ಣೆ, ನಿಡುವಾಳೆ, ಬಾಳೂರು ವ್ಯಾಪ್ತಿಯಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಗ್ರಾಮಸ್ಥರುಗಳು ಭೇಟಿ ನೀಡಿದ್ದು, ಪ್ರವಾಸದ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣವೊಂದರಲ್ಲಿ ಇದಕ್ಕೆ ಸಚಿವರು ಸಮಜಾಯಿಸಿ ಉತ್ತರ ನೀಡಿದ್ದರು. ಆದರೆ ಇದೀಗ ಅವರ ಪ್ರವಾಸವೇ ತಾಲ್ಲೂಕಿನ ಜನರಿಗೆ ದೊಡ್ಡ ಸಮಸ್ಯೆಯಾಗಿದ್ದು, ಅದರಲ್ಲೂ ರೈತರು ನೇರ ದುಷ್ಪರಿಣಾಮವನ್ನು ಎದುರಿಸುವಂತಾಗಿದೆ.
ಪ್ರವಾಸದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ 150ಕ್ಕೂ ಹೆಚ್ಚು ಜನರಿಗಾಗಿ ಹುಡುಕಾಟ ನಡೆಸಲಾಗಿದ್ದು ಕೆಲವರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಹೋಂಕ್ವಾರಂಟೈನ್ ವಿಷಯ ತಿಳಿಯುತ್ತಿದ್ದಂತೆ ಹಲವರು ಕಾಣೆಯಾಗಿದ್ದು, ಸಿಗದಿದ್ದಲ್ಲಿ ಅಂಥವರನ್ನು ಹುಡುಕು ಕಾನೂನು ಕ್ರಮ ಜರುಗಿಸಲು ಯೋಚನೆ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಬ್ರಿಜೇಶ್ ಕಡಿದಾಳ್ ಅವರು, ಪಸ್ತುತ ನಡೆಯಲಾಗಿದೆ ಎನ್ನಲಾದ ತಾ.ಪಂ.ಕೆಡಿಪಿ ಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತಾಲ್ಲೂಕು ಪ್ರವಾಸದಲ್ಲಿ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿರುವುದು ಸ್ವಾಗತಾರ್ಹ. ಆದರೆ ತಹಶೀಲ್ದಾರ್, ತಾ.ಪಂ.ಇ.ಓ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು ಅವರುಗಳನ್ನು ಹೋಂ ಕ್ವಾರಂಟೈನ್ ಮಾಡದೆ ಕೈಗೆ ಸಿಕ್ಕವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ. ಅಧಿಕಾರಿಗಳು ಎಂದ ಮಾತ್ರಕ್ಕೆ ಸೋಂಕು ತಗುಲುವುದಿಲ್ಲವೇ. ಎಲ್ಲರನ್ನೂ ಒಟ್ಟಿಗೆ ಕ್ವಾರಂಟೈನ್‍ಗೆ ಒಳಪಡಿಸಬೇಕು ಹಾಗೂ ರೈತರ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದರು.
ಬಳಿಕ ಮಾತನಾಡಿದ ಜಿ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಅನಂತ್ ಅವರು, ಸೋಕಿತರ ಪಕ್ಕದಲ್ಲಿ ಕುಳಿತವರನ್ನು ಬಿಟ್ಟು ಕೆಲವೇ ಕೆಲವರನ್ನು ಹೋಂ ಕ್ವಾರಂಟೈನ್ ಮಾಡಿ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ಅದರಲ್ಲೂ ಕೆಡಿಪಿ ಸಭೆಯಲ್ಲಿ ಸೋಂಕಿತರ ಪಕ್ಕದಲ್ಲಿ ಕುಳಿತಿದ್ದವರನ್ನು ಬಿಟ್ಟು ದೂರದಲ್ಲಿ ಕುಳಿತು ವರದಿ ಪಡೆದುಕೊಳ್ಳುತ್ತಿದ್ದ ಕೆಲವು ಪತ್ರಕರ್ತರುಗಳಿಗೆ ಹೋಂ ಕ್ವಾರಂಟೈನ್ ಮಾಡಿರುವುದು ಸರಿಯಲ್ಲ ಎಂದರು.










