ವರದಿ: ಸುಧೀರ್.ಬಿ.ಟಿ. ಮೂಡಿಗೆರೆ
ಹೇಮಾವತಿ ನದಿಯ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಆದರೆ ಹೇಮಾವತಿ ನದಿ ಹುಟ್ಟುವ ಮೂಲ ಸ್ಥಳ ಮಾತ್ರ ಕೆಲವರಿಗೆ ಮಾತ್ರ ಗೊತ್ತು. ಹೇಮಾವತಿ ನದಿಯ ಉಪಯೋಗ ರೈತರಿಗೆ ಸಿಗುತ್ತಿದ್ದರೂ ಹೇಮಾವತಿ ಹುಟ್ಟುವ ತಾಣ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಸಿರ ನಿಸರ್ಗದ ತಾಣ ಜಾವಳಿ. ಇಲ್ಲಿ ನದಿಮೂಲ ಮಾತ್ರವಲ್ಲದೇ ಪಕ್ಕದಲ್ಲೇ ವಿಘ್ನನಿವಾರಕ ಶ್ರೀಮಹಾಗಣಪತಿಯ ಪ್ರತಿಷ್ಠಾನದ ದೇವಸ್ಥಾನ ಸರ್ವ ಭಕ್ತರನ್ನು ನಿಸರ್ಗಾರಾಧಕರನ್ನು ಕೈಬೀಸಿ ಕರೆಯುವ ಕೇಂದ್ರವಾಗಿದೆ. ಜ.28ರಂದು ನಡೆಯುವ ಮಹಾಗಣಪತಿ ಉತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
“ ನದಿ ಮೂಲ ಮತ್ತು ಋಷಿ ಮೂಲ “ ಹುಡುಕಬಾರದು ಎಂಬ ನಾಣ್ಣುಡಿಯಂತೆ ಹೇಮಾವತಿ ನದಿ ಮೂಲದ ಜಾಡು ಕೂಡ ಭಾರೀ ನಿರೀಕ್ಷೆಯಿಂದ ಆಗಮಿಸಿದ ಪ್ರವಾಸಿಗರಿಗೆ ಹನಿಯ ರೂಪದಲ್ಲಿ ತೊಟ್ಟಿಕ್ಕುವ ಹೇಮಾವತಿ ನದಿ ಸಹಜವಾಗಿ ನಿರಾಸೆ ಮೂಡಿಸದೆ ಇರಲಾರಳು. ಜಾವಳಿ ಗ್ರಾಮದ ಬೆಟ್ಟದ ಮೇಲಿಂದ ಇಳಿದು ನದಿಯಾಗಿ ಹರಿಯುವ ಹೇಮಾವತಿ ಮೂಡಿಗೆರೆ ಮತ್ತು ಹಾಸನ ಸೇರಿದಂತೆ ಹಲವು ಜಿಲ್ಲೆಗಳ ರೈತರ ಸಂಕಷ್ಟಗಳಿಗೆ ಜೀವಧಾತೆಯಾಗಿದ್ದಾಳೆ. ಹೇಮಾವತಿಯ ಹುಟ್ಟು ಶ್ರೀಮಹಾಗಣಪತಿ ದೇವಸ್ಥಾನ ಸನ್ನಿಧಾನದಲ್ಲಿ ನೀರು ಹನಿ ರೂಪದಲ್ಲಿ ಪ್ರಾರಂಭವಾಗಿ ಮುಂದೆ ಸಾಗಿ ಬೃಹತಾಕಾರದಲ್ಲಿ ಹೇಮಾವತಿ ನದಿಯಾಗುತ್ತಾಳೆ.
ಹಲವು ವಿಶೇಷಗಳ ಹೇಮಾವತಿಯ ನದಿ ಮೂಲವಾದ ಜಾವಳಿಯ ಬೆಟ್ಟದಲ್ಲಿ ಪ್ರತಿವರ್ಷವೂ ಉತ್ಸವದ ಸಂಭ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ಜನವರಿ ತಿಂಗಳು ಬಂತೆಂದರೆ ಹೇಮಾವತಿ ನದಿಯ ಮೂಲದಲ್ಲಿ ಜನಜಂಗುಳಿಯ ಪಲ್ಲಕ್ಕಿ ಉತ್ಸವ ನೋಡಲು ಎರಡು ಕಣ್ಣುಗಳು ಸಾಲವು. ಜನವರಿ ತಿಂಗಳ 28ರಂದು ಜಾತ್ರೆಯ ಸಂಭ್ರಮಕ್ಕೆ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರವೀಣ್.ಎ.ಗುರ್ಜಾರ್ ಅವರ ಸಹಯೋಗದೊಂದಿಗೆ ಶ್ರೀಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ಅನ್ನಧಾನ, ಪಲ್ಲಕ್ಕಿ ಉತ್ಸವ ಅದ್ದೂರಿಯಿಂದ ಸಾಗುತ್ತದೆ. ಸಮಿತಿಯ ಸದಸ್ಯರು, ಸ್ಥಳೀಯರು ಹಾಗೂ ದೂರದ ಊರುಗಳಿಂದ ಬರುವ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.
ಇತಿಹಾಸದ ಚರಿತ್ರೆಯ ಪುಟಗಳಲ್ಲಿ ಜಾವಳಿಯ ನಂಟು : ಹೇಮಾವತಿ ನದಿಯ ಇತಿಹಾಸ ಪುರಾಣದ ಮಜಲುಗಳಲ್ಲಿ ಸತ್ಯಕಾಮನೆಂಬ ಹುಡುಗನು ಜ್ಷಾನಿಗಳಾದ ಗೌತಮ ಮಹರ್ಷಿ ಅವರ ಬಳಿಗೆ ಹೋಗಿ ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ವಿನಂತಿಸಿದನಂತೆ, ಗೌತಮ ಮಹರ್ಷಿಯು ಆತನ ಗೋತ್ರವನ್ನು ವಿಚಾರಿಸಿದಾಗ ಅವನಿಗೆ ಅದು ತಿಳಿಯದೇ ಇದ್ದುದ್ದರಿಂದ ಆತನ ತಾಯಿ ಜಾವಾಲಿ ಬಳಿ ವಿಚಾರಿಸಲು ಸಾಗುತ್ತಾನೆ. ತಾಯಿಗೂ ಕೂಡ ತಿಳಿಯದೇ ಇದ್ದುದರಿಂದ ಮಹರ್ಷಿಯವರಿಗೆ ಅದರ ಬಗ್ಗೆ ತನಗೂ ತನ್ನ ತಾಯಿಗೂ ಅರಿತಿಲ್ಲವೆಂದು ಹೇಳಿದಾಗ ಮಹರ್ಷಿಯು ಸತ್ಯಕಾಮನ ಪೂರ್ವಾಪರ ಮೊದಲೇ ತಿಳಿದುಕೊಂಡು ಸತ್ಯಕಾಮನನ್ನು ಬ್ರಾಹ್ಮಣನನ್ನಾಗಿ ಸ್ವೀಕರಿಸುತ್ತಾರೆ. ಗೌತಮ ಮಹರ್ಷಿಯು ಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿ 300 ಗೋವುಗಳನ್ನು ನೀಡಿ ಇವುಗಳ ಸಂಖ್ಯೆ 1000 ಆಗುವ ತನಕ ನೋಡಿಕೊಳ್ಳಲು ಆಜ್ಞಾಪಿಸುತ್ತಾರೆ. ಗುರು ಕೊಟ್ಟ ಹಸುಗಳೊಂದಿಗೆ ತಪಸ್ಸಿಗೆ ತೆರಳುತ್ತಾನೆ. ಹಾಗೆ ತಪಸ್ಸಿಗೆ ಕುಳಿತ ಬೆಟ್ಟವೇ ಜಾವಳಿ ಸಮೀಪದ ಹೇಮಾವತಿ ಬೆಟ್ಟ. ಆತನು ಸ್ಥಾಪಿಸಿದ ಆಶ್ರಮದ ವಾತಾವರಣದಲ್ಲಿ ನೀರಿಲ್ಲ ಎಂದು ಗಮನಕ್ಕೆ ಬಂದ ಸತ್ಯಕಾಮನಿಗೆ ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾರ್ವತಿಯನ್ನು ಪ್ರಾರ್ಥಿಸಿದ್ದರಿಂದ ದೇವಿ ಪಾರ್ವತಿಯು ಪ್ರತ್ಯಕ್ಷವಾದಾಗ ಸತ್ಯಕಾಮನು ಹಸುಗಳಿಗೆ ಕುಡಿಯಲು ನೀರಿಲ್ಲ ಎಂದು ಉತ್ತರಿಸುತ್ತಾನೆ. ದಟ್ಟವಾದ ಅರಣ್ಯದ ಮಧ್ಯೆ ಹಿಮ ಮತ್ತು ಮಂಜುಗೆಡ್ಡೆ ಪ್ರತ್ಯಕ್ಷವಾದುವು. ಹಿಮವು ನೀರಾಗಿ ಹರಿದು ಒಣ ಭೂಮಿ ಫಲವತ್ತತೆಯಾಗಲಿ ಎಂದು ಅಜ್ಞಾಪಿಸಿದಾಗ ಹಿಮವು ಕರಗಿ ನೀರಾಗಿ ಹಿಮವಾಹಿನಿಯಾಯಿತು ಎಂಬುವುದು ಇಲ್ಲಿನ ನಂಬಿಕೆ. ಸತ್ಯಕಾಮನು ಸ್ಥಾಪಿಸಿದ ಆಶ್ರಮ ಜಾವಾಲಿ ಎಂದಾಯಿತು. ಕಾಲಕ್ರಮೇಣ ಜಾವಳಿ ಎಂದು ಬದಲಾಯಿತು ಎಂಬುವುದು ಇತಿಹಾಸಕಾರರ ಅಭಿಪ್ರಾಯ.
ನದಿಮೂಲದ ದೇವಸ್ಥಾನಕ್ಕೆ ಹೊಸ ದಾರಿ: ಹೇಮಾವತಿಯ ನದಿಮೂಲ ಮತ್ತು ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಸಾಗಲು ರಸ್ತೆಯು ಕಿರಿದಾಗಿದ್ದು ಜಾವಳಿಯಿಂದ ಹಿಂದೆ ರಾಜ್ಯ ಹೆದ್ದಾರಿಯಲ್ಲಿಯೇ ಬಾಳೂರಿನಿಂದ 2 ಕಿಮೀ ಅಂತರದಲ್ಲಿ ರಸ್ತೆ ನಿರ್ಮಾಣಮಾಡಲಾಗಿತ್ತು. ಆದರೆ ಆ ರಸ್ತೆ ಕಿರಿದಾಗಿದ್ದರಿಂದ ವಾಹನಗಳು ಸಾಗಲು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಈ ಬಾರಿ ಉತ್ಸವಕ್ಕೆ ಸಾಗಲು ಜಾವಳಿಯ ಗ್ರಾ.ಪಂ.ಸಮೀಪದ ರಸ್ತೆಯಲ್ಲಿ ಉತ್ತಮವಾದ ರಸ್ತೆ ನದಿಮೂಲಕ್ಕೆ ಯಾವುದೇ ಅಡಚಣೆಯಾಗದಂತೆ ನಿರ್ಮಿಸಲಾಗಿದೆ. ಜಾವಳಿ ಊರಿನಿಂದ 2 ಕಿ.ಮೀ ಕ್ರಮಿಸಿದರೆ ದೇವಸ್ಥಾನಕ್ಕೆ ನೇರವಾಗಿ ತೆರಳಬಹುದು. ಬಾಳೂರಿನಿಂದ 2 ಕಿ.ಮೀ ಅಂತರದ ಎಡಗಡೆಯ ರಸ್ತೆಯಲ್ಲೂ ಕೂಡ ಹೇಮಾವತಿಗೆ ಸಾಗಬಹುದು.
ಗಣಪತಿ ಉತ್ಸವಕ್ಕೆ ಭರ್ಜರಿಯ ಸಿದ್ಧತೆ : ಜಾವಳಿಯ ಹೇಮಾವತಿ ಜಾತ್ರೆಗೆ ಇಲ್ಲಿಯ ಹಿರಿಯರಾದ ಪ್ರವೀಣ್.ಎ.ಗುರ್ಜಾರ್ ಅವರ ನೇತೃತ್ವದಲ್ಲಿ ದೇವಸ್ಥಾನಕ್ಕೆ ಉತ್ಸವ ಸಮಿತಿಯ ಸದಸ್ಯರು ಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಲು ನೆರವಾಗುತ್ತಾರೆ. ಊರಿನ ಪ್ರಮುಖರು, ಭಕ್ತಾಭಿಮಾನಿಗಳು ಕೂಡ ಕೈಜೋಡಿಸಿ ಉತ್ಸವದಲ್ಲಿ ವಿಶೇಷ ಪೂಜೆ ನಡೆಯಲು ಸಹಕರಿಸುತ್ತಾರೆ. ಜನವರಿ 28ರಂದುಬೆಳಿಗ್ಗೆ 8 ಗಂಟೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಪಲ್ಲಕ್ಕಿ ಉತ್ಸವ ನಡೆಸಿ ಸರ್ವ ಭಕ್ತರಿಗೂ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯುತ್ತದೆ. ಸಾವಿರಾರು ಭಕ್ತರು ಹೇಮಾವತಿ ಉತ್ಸವದಲ್ಲಿ ಭಾಗವಹಿಸಿ ಗಣಪತಿಗೆ ಪೂಜಿಸಿ ಸಂತೃಪ್ತರಾಗುತ್ತಾರೆ.
ಪರೀಕ್ಷಿತ್ಜಾವಳಿ – “ಪ್ರತಿವರ್ಷವೂ ಹೇಮಾವತಿಯಲ್ಲಿ ಶೃಧ್ದಾಭಕ್ತಿಯಿಂದ ಮಹಾಗಣಪತಿ ಉತ್ಸವ ನಡೆಯುತ್ತದೆ. ಪ್ರತಿವರ್ಷವು ನಾನು ಈ ಉತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆಯಲ್ಲಿ ಭಾಗವಹಿಸುತ್ತೇನೆ. ಉತ್ಸವ ಸಮಿತಿಯ ಪದಾಧಿಕಾರಿಗಳ ಅಚ್ಚುಕಟ್ಟಾದ ವ್ಯವಸ್ಥೆಯು ಜಾತ್ರಾ ಸಮಯದಲ್ಲಿ ಇರುತ್ತದೆ. ಸರ್ವ ಭಕ್ತರನ್ನು ಆಕರ್ಷಿಸುವ ಐತಿಹಾಸಿಕ ತಾಣ ಇದಾಗಿದ್ದು. ದೂರದ ಊರಿನಿಂದಲೂ ಪ್ರವಾಸಿಗರು ಹೇಮಾವತಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.”










