ಮೂಡಿಗೆರೆ : ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಳಸ ಸಮೀಪದ ದುಗ್ಗಲಮಕ್ಕಿ ಗ್ರಾಮದಲ್ಲಿ ನಡೆದಿದೆ. ರಮೇಶ್(28) ಮೃತ ಕಾರ್ಮಿಕ ಎಂದು ಗುರುತಿಸಲಾಗಿದ್ದು, ಮೃತ ಕಾರ್ಮಿಕ ಕೃಷ್ಣೇಗೌಡ ಎಂಬುವವರ ಮಾಲೀಕತ್ವದ ಅಡಕೆ ತೋಟಕ್ಕೆ ಔಷಧಿ ಸಿಂಪಡಿಸಲು ಕಬ್ಬಿಣದ ಏಣಿಯನ್ನು ಹೊತ್ತೊಯ್ಯುವಾಗ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೋಟಗಳಲ್ಲಿ ಔಷಧಿ ಸಿಂಪಡಣೆಗೆ ಕಬ್ಬಿಣದ ಏಣಿಗಳನ್ನು ಬಳಸುತ್ತಿರುವುದರಿಂದ ಈ ರೀತಿ ವಿದ್ಯುತ್ ತಂತಿ ಸ್ಪರ್ಷಿಸಿ ಸಾವನ್ನಪ್ಪುವುದು ಸಾಮಾನ್ಯವಾಗಿದ್ದು, ಹೀಗಾಗಿ ತೋಟದ ಮಾಲೀಕ ಕೃಷ್ಣೇಗೌಡ ಅವರು ಕಾರ್ಮಿಕರಿಗೆ ವಿಮೆ ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










