ಮೂಡಿಗೆರೆ : ದಾನಿಗಳು ನೀಡಿದ ನೆರವಿನಿಂದಾಗಿ ಚಿನ್ನಿಗ ಶಾಲೆಯು ಮಾದರಿ ಶಾಲೆ ಎಂದು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ: ಎಂ.ಪಿ.ಕುಮಾರಸ್ವಾಮಿ.

455
firstsuddi

ಮೂಡಿಗೆರೆ : ಚಿನ್ನಿಗ ಶಾಲೆಯು ದಾನಿಗಳು ನೀಡಿದ ನೆರವಿನಿಂದಾಗಿ ಚಿನ್ನಿಗ ಶಾಲೆಯು ಮಾದರಿ ಶಾಲೆ ಎಂದು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ನಿಜವಾಗಿಯೂ ಎಲ್ಲರೂ ಹೆಮ್ಮೆ ಪಡುವಂಥಹ ವಿಚಾರವಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಹೇಳಿದರು.
ತಾಲ್ಲೂಕಿನ ಚಿನ್ನಿಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಶಾಲೆಯೆ ಶಿಕ್ಷಕರ ಸತತ ಪರಿಶ್ರಮದ ಫಲವಾಗಿ ಶಿಕ್ಷಣ ಹಾಗೂ ಕ್ರೀಡೆ ಎರಡರಲ್ಲಿಯೂ ಇಲ್ಲಿನ ಶಾಲೆಯ ಮಕ್ಕಳು ಗುರುತಿಸಿಕೊಳ್ಳುತ್ತಿರುವುದು ಸಂತಸದ ವಿಚಾರ. ದಾನಿಗಳ ನೆರವಿನ ಜೊತೆಯಲ್ಲಿ ಶಾಸಕರ ನಿಧಿಯಿಂದ ಶಾಲೆಯ ಅಭ್ಯುದಯಕ್ಕೆ ಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಿಸಿ ಕೊಡಲಾಗುವುದು. ಇದರಲ್ಲಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲು ಸೂಚಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದಲ್ಲಿ ಅದನ್ನೂ ಕೂಡ ಭರಿಸಲಾಗುವುದು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಮಾತನಾಡಿ, ದೇಶದಲ್ಲಿನ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವಲ್ಲಿ ಶಾಲೆಗಳ ಪಾತ್ರ ಬಹಳ ಮುಖ್ಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣವನ್ನು ಒದಗಿಸುವ ಮೂಲಕ, ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಸರ್ಕಾರಿ ಶಾಲೆಗೆ ನೇಮಕವಾಗಿ ಬರುವ ಶಿಕ್ಷಕರು ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿ ಬಂದಿರುವುದರಿಂದ ಉತ್ತಮ ಮಟ್ಟದ ಶಿಕ್ಷಣ ನೀಡಲು ಸಾಧ್ಯ. ಸರ್ಕಾರವೂ ಕೂಡ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸಕಲ ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಆದರೆ ಸಮಾಜಕ್ಕೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಇಂತಹ ಮನಸ್ಥಿತಿಯಿಂದ ದೂರ ಬಂದು ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಾನಿಗಳು ನೀಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಿಸಿ ಕ್ಯಾಮೆರಾಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಅಮಿತಾ ಮುತ್ತಪ್ಪ, ತಾ.ಪಂ.ಸದಸ್ಯ ಸುಂದರ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ರಘು, ಗ್ರಾ.ಪಂ.ಅಧ್ಯಕ್ಷ ನಿಡುಗೋಡು ಸುನೀಲ್, ಸದಸ್ಯರಾದ ಅಣ್ಣಪ್ಪ, ಶಂಕರಾಚಾರ್, ಪಾರ್ವತಮ್ಮ, ಗ್ರಾಮಸ್ಥರಾದ ಪುಟ್ಟಸ್ವಾಮಿ ಗೌಡ, ನಿಡಗೋಡು ಪ್ರದೀಪ್, ಶಿಕ್ಷಕರಾದ ಸುರೇಖಾ, ಮಾಲತಿ, ರಂಮ್ಲಂ ಬೇಗಂ, ಅಶೋಕ್, ವೀಟ್ಯಾ ನಾಯ್ಕ, ಪ್ರೇಮ್ ಕುಮಾರ್ ಇದ್ದರು.