ಮೂಡಿಗೆರೆ : ದೇವರಮನೆ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ…

182
firstsuddi

ಕೊಟ್ಟಿಗೆಹಾರ : ಬಣಕಲ್ ಸಮೀಪದ ದೇವರಮನೆ ಗುಡ್ಡದಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡು ಸುಮಾರು ಎಕರೆ ಕುರುಚಲು ಅರಣ್ಯ ಪ್ರದೇಶವು ಬೆಂಕಿಗೆ ಆಹುತಿಯಾಗಿದೆ. ಗುಡ್ಡದಲ್ಲಿ ಬೆಂಕಿಯು ಉರಿದು ಸುಮಾರು ಎಕರೆ ವಿಸ್ತೀರ್ಣಕ್ಕೆ ಹೊತ್ತಿ ಸಾಗಿದ್ದು ಅರಣ್ಯ ನಾಶವಾಗಿದೆ.
ದೇವರಮನೆಯ ಸುಂದರ ಪ್ರಕೃತಿಯ ತಾಣವು ಹಸಿರು ಹೊದ್ದು ಕಣ್ಣಿಗೆ ತಂಪು ನೀಡುತ್ತಿತ್ತು. ಹಸಿರನ್ನು ಆಶ್ರಯಿಸಿರುವ ಸಸ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಸಂರಕ್ಷಣೆಯ ಕಾರ್ಯ ಮಾಡುತ್ತಿರುವ ಅರಣ್ಯ ಇಲಾಖೆ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರೂ ಕೆಲವು ಕಡೆ ಬೆಂಕಿಯ ಕಿಡಿಗಳು ನಂದಿ ಹೋಗದೇ ಗುಡ್ಡ ಉರಿದು ಕಪ್ಪು ಮಸಿಯಾಗಿದೆ. ಹಸಿರ ಸಿರಿ ಹೊದ್ದಿದ್ದ ಗುಡ್ಡ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಸುಮಾರು 50 ಎಕರೆಗೂ ಅಧಿಕ ಕುರುಚಲು ಅರಣ್ಯ ನಾಶವಾಗಿದ್ದು ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಕಿಡಿಗೇಡಿಗಳು ಕೃತ್ಯ ವೆಸಗಿರಬಹುದೆಂದು ಶಂಕಿಸಲಾಗಿದೆ. ದೇವರಮನೆ ಅರಣ್ಯ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗಳು ದೂರವಾಣಿ ಕರೆ ಸ್ವೀಕರಿಸದೇ ಇರುವುದರಿಂದ ಅರಣ್ಯ ನಾಶದ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.