ಬಣಕಲ್ : ತೀವ್ರ ಕುತೂಹಲ ಕೆರಳಿಸಿದ್ದ ಬಣಕಲ್ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ 11 ನಿರ್ದೇಶಕರ ಸ್ಥಾನಗಳಲ್ಲಿ 8 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸಾಲ ರಹಿತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಮೇಶ್ ಕೂಡಳ್ಳಿ ಜಯಬೇರಿ ಬಾರಿಸಿದ್ದು ಸಾಲಗಾರರ ಕ್ಷೇತ್ರದ 11 ಮತ್ತು ಸಾಲ ರಹಿತ ಕ್ಷೇತ್ರದ 1 ಸ್ಥಾನವೂ ಸೇರಿ ಒಟ್ಟು 12 ಅಭ್ಯರ್ಥಿಗಳಲ್ಲಿ 9 ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನದಿಂದ ಸ್ಪರ್ದಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಬಿ.ಎಂ ಭರತ್ 784, ಅಭಿಲಾಷ್ 635, ಗಜೇಂದ್ರ ಟಿ.ಎಂ 626, ಕಲ್ಲೇಶ್ ಬಿ.ಎಸ್ 570, ಪರಿಶಿಷ್ಟ ಪಂಗಡದ ಮೀಸಲು ಸ್ಥಾನದಿಂದ ಚಂದ್ರಶೇಖರ್ 343, ಮಹಿಳಾ ಮೀಸಲು ಸ್ಥಾನದಿಂದ ಮಮತಾ ಹೆಚ್.ಕೆ 432, ಹಿಂದುಳಿದ ವರ್ಗದ ಪ್ರವರ್ಗ ಎ ಮೀಸಲು ಸ್ಥಾನದಿಂದ ರಂಗನಾಥ್ 447, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಶಾಮಣ್ಣ ಬಣಕಲ್ 442, ಮತಗಳನ್ನು ಪಡೆದರೆ ಬಿಜೆಪಿಯ ಇನ್ನೊಂದು ಬಣ ಬೆಂಬಲಿತ ಸಾಮಾನ್ಯ ಸ್ಥಾನದಿಂದ ಸ್ಪರ್ದಿಸಿದ್ದ ವಿಕ್ರಮ್ ಬಿ.ಎಸ್ 587, ಮಹಿಳಾ ಮೀಸಲು ಸ್ಥಾನದಿಂದ ಲಕ್ಷ್ಮೀ ಜಿ.ಬಿ 365, ಕಾಂಗ್ರೆಸ್ ಬೆಂಬಲಿತ ಹಿಂದುಳಿದ ವರ್ಗದ ಪ್ರವರ್ಗ ಎ ಸ್ಥಾನದಿಂದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ದಿಲ್‍ದಾರ್ ಬೇಗಂ 426, ಹಾಗೂ ಸಾಲ ರಹಿತ ಕ್ಷೇತ್ರದ ಅಭ್ಯರ್ಥಿ ರಮೇಶ್ ಕೂಡಳ್ಳಿ 83 ಮತಗಳನ್ನು ಪಡೆದು ಜಯಬೇರಿ ಬಾರಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳು ಬಣಕಲ್ ಹಾಗೂ ಕೊಟ್ಟಿಗೆಹಾರದಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ವಿಜೇಂದ್ರ ಕಾರ್ಯ ನಿರ್ವಹಿಸಿದರು. ಕಾರ್ಯ ನಿರ್ವಾಹಣಾಧಿಕಾರಿ ನಿಶಾಂತ್ ಮೊದಲಾದವರು ಹಾಜರಿದ್ದರು.










