ಮೂಡಿಗೆರೆ (ಜಯಮಿತ್ರ) : ಕೆಲವು ಸಂದರ್ಭಗಳಲ್ಲಿ ವಿಧಿಯ ಕ್ರೂರ ಆಟ ಬಲ್ಲವನ್ಯಾರು. ಆದರೆ, ವಿಧಿ ಇಷ್ಟೊಂದು ಕ್ರೂರಿಯಾಗಬಾರದು ! ಅಂಗವೈಕಲ್ಯದಿಂದ ಬಳಲುತ್ತಿರುವ ಮಗ, ಬುದ್ಧಿ ಮಾಂದ್ಯೆಯಾದ ಮಗಳ ಆರೈಕೆ ಮಾಡುತ್ತಾ ಮನೆಗೆ ಆಧಾರವಾಗಿದ್ದ ಮನೆಯೊಡೆಯ ಪಾರ್ಶ್ವವಾಯುಗೆ ತುತ್ತಾಗಿ ಆ ಕುಟುಂಬ ದಿಕ್ಕು ಕಾಣದೇ ಕುಳಿತ ಕರುಣಾಜನಕ ಪರಿಸ್ಥಿತಿಯಲ್ಲಿ ಕುಟುಂಬವೊಂದು ಸಿಕ್ಕಿಕೊಂಡಿದೆ.
ಪಾಲಕರಿಗೆ 50 ವರ್ಷವಾಗುವ ಹೊತ್ತಿಗೆ ಮಕ್ಕಳು ಉದ್ಯೋಗ ಮಾಡುವ ಹಂತಕ್ಕೆ ಬಂದಿರುತ್ತಾರೆ. ನಮ್ಮ ಬೇಕು ಬೇಡಗಳನ್ನು ಪೂರೈಸುತ್ತಾ ಆಸರೆಯಾಗಬೇಕು ಎಂಬುವುದು ಎಲ್ಲಾ ಪಾಲಕರ ಆಸೆ. ಆದರೆ, ಬಾಳೂರು ಗ್ರಾಮದ ಚೆನ್ನಡ್ಲಿನ ಸುಂದರ್ ಹಾಗೂ ಅರುಣಾ ದಂಪತಿಗೆ ಈ ಭಾಗ್ಯವಿಲ್ಲ ಏಕೆಂದರೆ ಮಗ ರಾಕೇಶನಿಗೆ ಈಗ 30 ವರ್ಷ. ಎರಡೂ ಕೈಕಾಲುಗಳೂ ಊನವಾಗಿದೆ. ನೋಡಲು ಪುಟ್ಟ ಹುಡುಗನಂತೆ ಕಾಣುತ್ತಾನೆ. ಕೈ ಕಾಲುಗಳಲ್ಲಿ ಶಕ್ತಿ ಇಲ್ಲ. ಎತ್ತಲೋ ನೋಡಿ ಸುಮ್ಮನೇ ನಗುತ್ತಾನೆ. ವಿಚಿತ್ರವಾಗಿ ವರ್ತಿಸುತ್ತಾನೆ. ಈತನ ತಂಗಿ ರೇಖಾಗೆ 28 ವರ್ಷ. ಈಕೆಯೂ ಮಾತನಾಡಲು ಕಷ್ಟಪಡುತ್ತಾಳೆ. ದೈಹಿಕ ನ್ಯೂನತೆ ಜತೆ ಬುದ್ಧಿಮಾಂದ್ಯಳು. ಮಕ್ಕಳಿಬ್ಬರಿಗೂ ಮಂಗಳೂರು, ಬೆಂಗಳೂರು, ಕೇರಳದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಣ ಖರ್ಚಾಯಿತೆ ಹೊರತು ಗುಣವಾಗಲಿಲ್ಲ.
ಈಗಾ ಗಾಯದ ಮೇಲೆ ಬರೆ ಎಳೆದಂತೆ ಈ ಇಬ್ಬರ ತಂದೆ ಹಾಗೂ ಮನೆಗೆ ಆಧಾರವಾಗಿದ್ದ ಮನೆ ಯಜಮಾನ ಸುಂದರ್ 2 ದಿನದ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದು, ದೇಹದ ಒಂದು ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ವೃತ್ತಿಯಲ್ಲಿ ಚಾಲಕರಾಗಿದ್ದ ಸುಂದರ್ ಅವರ ದುಡಿಮೆಯಿಂದಲೇ ಮನೆ ನಡೆಯುತ್ತಿತ್ತು. ಅವರ ದುಡಿಮೆಯಲ್ಲೆ ಇಬ್ಬರು ಮಕ್ಕಳ ಔಷಧಿ ಖರ್ಚು, ಮನೆ ನಿರ್ವಹಣೆಯ ಖರ್ಚು ನೋಡಿಕೊಳ್ಳಬೇಕಾಯಿತ್ತು.
ಲಾಕ್‍ಡೌನ್ ಪ್ರಾರಂಭವಾದ ದಿನದಿಂದ ಸರಿಯಾಗಿ ಕೆಲಸವಿಲ್ಲದೇ ಹೊತ್ತಿನ ಊಟಕ್ಕೆ ತೊಂದರೆಯಾಗಿದ್ದ ಸಂದರ್ಭದಲ್ಲಿ ಸುಂದರ್ ಅವರು ಪಾರ್ಶ್ವವಾಯು ಪೀಡಿತರಾಗಿರುವುದು ಕುಟುಂಬದ ಸದಸ್ಯರಿಗೆ ದಿಕ್ಕೆ ತೋಚದಂತಾಗಿದೆ.
ಬುದ್ದಿಮಾಂದ್ಯ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳುವುದೋ ಅಥವಾ ಪಾರ್ಶ್ವವಾಯು ಪೀಡಿತವಾಗಿ ಹಾಸಿಗೆ ಹಿಡಿದಿರುವ ಗಂಡನನ್ನು ನೋಡಿಕೊಳ್ಳುವುದೋ ತಿಳಿಯುತ್ತಿಲ್ಲ. ನಾಳೆ ದಿನ ನನಗೆನ್ನಾದರೂ ಆದರೆ ಇವರನ್ನು ನೋಡಿಕೊಳ್ಳುವುದು ಯಾರು ಎಂದು ಕಣ್ಣೀರಿಡುತ್ತಾರೆ ಸುಂದರ್ ಅವರ ಪತ್ನಿ ಅರುಣಾ.
ಸುಂದರ್ ಅವರ ಚಿಕಿತ್ಸೆಗೆ ಲಕ್ಷಾಂತರ ರೂ ಬೇಕಾಗಿದ್ದು ಈ ಕತೆ ಕೇಳಿದ ಮೇಲೆ ಯಾರಿಗಾದರೂ ಧನ ಸಹಾಯ ಮಾಡಬೇಕು. ನಾವೂ ಅವರ ಕುಟುಂಬಕ್ಕೆ ಸ್ವಲ್ಪಮಟ್ಟಿಗೆ ಆಧಾರವಾಗಿ ನಿಲ್ಲಬೇಕು ಎನಿಸಿದರೆ ಸುಂದರ್ ಅವರ ಪತ್ನಿ ಅರುಣ ಅವರ ಕೊಟ್ಟಿಗೆಹಾರ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಖಾತೆ ಸಂಖ್ಯೆ 12269100004988 ಐಎಪ್‍ಎಸ್‍ಸಿ ಕೋಡ್ ಪಿಕೆಜಿಬಿ0010506 ಗೆ ಧನಸಹಾಯ ಮಾಡಬಹುದು. ಮಾಹಿತಿಗೆ 9481029818 ಗೆ ಸಂಪರ್ಕಿಸಬಹುದು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಬುದ್ಧಿಮಾಂದ್ಯ ಮಗಳು, ಅಂಗವಿಕಲ ಮಗ, ಪತಿಗೆ ಪಾರ್ಶ್ವವಾಯು ಕಣ್ಣೀರಲ್ಲಿ ಕೈ ತೊಳೆಯುವ ಈ...










