ಕೊಟ್ಟಿಗೆಹಾರ : ಕಳೆದ ಕೆಲವು ತಿಂಗಳುಗಳಿಂದ ಬಿ ಹೊಸಳ್ಳಿ, ಭಾರತಿಬೈಲ್ ಸುತ್ತಮುತ್ತ ಹುಲಿ ಹೆಜ್ಜೆ ಕಾಣಿಸಿಕೊಂಡು ಆಗಾಗ ಹುಲಿ ಘರ್ಜನೆಯೂ ಕೇಳಿಸುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಭಾರತಿಬೈಲ್‍ನ ಕೆಲವು ಕಾಫಿತೋಟಗಳಲ್ಲಿ ಹುಲಿ ಹೆಜ್ಜೆಗಳು ಕಾಣಿಸಿಕೊಂಡಿದ್ದು ಹುಲಿ ಘರ್ಜನೆಯೂ ಕೇಳಿಸುತ್ತಿರುವುದರಿಂದ ಕಾರ್ಮಿಕರು ಕಾಫಿತೋಟಗಳಿಗೆ ಬರಲು ಹಿಂದೇಟು ಹಾಕುವಂತಾಗಿದೆ. ಕಾಫಿತೋಟಗಳಿಗೆ ಬರುವ ಪುರುಷ ಕಾರ್ಮಿಕರು ಅಚಾನಕ್ಕಾಗಿ ಹುಲಿ ಎದುರಾದರೇ ಮರ ಏರಲು ಸಮೀಪದ ಮರಗಳನ್ನು ಗುರುತಿಸಿಕೊಂಡು ಕೆಲಸದಲ್ಲಿ ತೊಡಗಿದ್ದರೆ ಮಹಿಳಾ ಕಾರ್ಮಿಕರು ಹುಲಿ ಬಂದರೆ ಮರ ಹತ್ತಲು ಸುಲಭವಾಗಲಿ ಎಂದು ಮರಕ್ಕೆ ಏಣಿಯನ್ನು ಕಟ್ಟಿಕೊಂಡು ಮುಂಜಾಗ್ರತೆ ವಹಿಸಿಕೊಂಡು ಕಾಫಿತೋಟದ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಭಾರತಿಬೈಲ್‍ನ ರೈತ ರಫೀಕ್ ಅವರು, ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕದಲ್ಲಿ ದಿನಕಳೆಯುವಂತಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.










