ಮೂಡಿಗೆರೆ : ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಬೆಟ್ಟ ಕುಸಿತ-ವಾಹನ ಸಂಚಾರ ಸ್ಥಗಿತ…

269
firstsuddi

ಮೂಡಿಗೆರೆ : ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಾಲ್ಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ ಘಾಟ್‍ನಲ್ಲಿ ಮತ್ತೆ ಬೆಟ್ಟ ಕುಸಿತವಾಗಿದೆ. ಅಲ್ಲದೇ ಚಾರ್ಮಾಡಿ ಘಾಟ್‍ನ ಅಲೇಖಾನ್ ಪ್ರದೇಶದ ರಸ್ತೆಯಲ್ಲಿ ಸುಮಾರು 15 ಅಡಿ ಹಂತರದಲ್ಲಿ ಎರಡು ಕಡೆ ರಸ್ತೆಯಲ್ಲಿ ಭಾರಿ ಬಿರುಕು ಕಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಇದರ ನಡುವೆ ಚಾರ್ಮಾಡಿ ಚೆಕ್‍ಪೋಸ್ಟ್ ಹಾಗೂ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಗಳನ್ನು ಬಂದ್ ಮಾಡಲಾಗಿದ್ದು, ನೂರಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.