ಮೂಡಿಗೆರೆ : ವಿದ್ಯುತ್ ತಂತಿ ತುಂಡಾದ ಪರಿಣಾಮ ಹೊತ್ತಿ ಉರಿದ ಬಿದಿರು ಮೆಳೆ…

253
First Suddi

ಕೊಟ್ಟಿಗೆಹಾರ : ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಬ್ಬೇನಹಳ್ಳಿ ಸಮೀಪ ವಿದ್ಯುತ್ ತಂತಿ ತುಂಡಾಗಿ ಬಿದ್ದು ಬಿದಿರುಮೆಳೆ ಹೊತ್ತಿ ಉರಿದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಿದ್ದು ವಿದ್ಯುತ್ ಕಂಬವೊಂದರಿಂದ ವಿದ್ಯುತ್ ತಂತಿಯೊಂದು ತುಂಡಾಗಿ ನೆಲಕ್ಕೆ ಬಿದ್ದಿದ್ದು ಪಕ್ಕದಲ್ಲೆ ಇದ್ದ ಬಿದಿರುಮೆಳೆಗೆ ತಗುಲಿ ಬೆಂಕಿ ಹತ್ತಿಕೊಂಡಿದೆ. ಪಕ್ಕದಲ್ಲಿರುವ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು ಪಾದಚಾರಿಗಳು ಸಂಚರಿಸುತ್ತಿದ್ದರು. ತಂತಿಯನ್ನು ತುಳಿದು ಅವಘಡ ಸಂಭವಿಸುವ ಅಪಾಯವಿತ್ತು.
ಬಿದಿರುಮೆಳೆಗೆ ಬೆಂಕಿ ಬಿದ್ದು ದಗದಗಿಸಿ ಉರಿಯುತ್ತಿದ್ದಂತೆ ಸ್ಥಳಿಯರು ಗಮನಿಸಿ ಕೂಡಲೇ ಮೆಸ್ಕಾಂ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ತಿಳಿಸಿದರು. ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದರು. ಕೂಡಲೇ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಆ ವೇಳೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.