ಮೂಡಿಗೆರೆ : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಪಟ್ಟಣದ ಬಿಳಗುಳದಲ್ಲಿರುವ ಶಿವಾಜಿನಗರದಲ್ಲಿ ಶೌರ್ಯ ದಿನಾಚರಣೆ ಜೊತೆಗೆ ಭಜರಂಗದಳದ ಶಿವಾಜಿನಗರ ಘಟಕಕ್ಕೆ ಚಾಲನೆ ನೀಡಲಾಯಿತು.
ಇಂದು ಮಧ್ಯಾಹ್ನ 12 ಗಂಟೆಗೆ ಶಿವಾಜಿನಗರದ ರಾಜು ಪೂಜಾರಿ ಅವರಿಂದ ಶಿವಾಜಿ ಧ್ವಜವನ್ನು ಆರೋಹಣ ಮಾಡಿಸುವ ಮೂಲಕ ನೂತನ ಘಟಕವನ್ನು ಉದ್ಘಾಟಿಸಲಾಯಿತು. ಪಾರ್ಥನೆಯೊಂದಿಗೆ ಅರಂಭವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಭಜರಂಗದಳ ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಅವಿನಾಶ್ ಅವರು ಮಾತನಾಡಿ, ಹಿಂದೂ ಸಂಘಟನೆಗಳನ್ನು ಕೆಟ್ಟ ಸಂಘಟನೆಗಳಿಗೆ ಹೋಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ನಮ್ಮ ಸಂಘಟನೆಗಳು ಸಮಾಜಮುಖಿ ಕೆಲಸಗಳ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಮಾಡಿದೆ. ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಭಾರೀ ಸಂಖ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳಕ್ಕೆ ಯುವಕರು ಸೇರ್ಪಡೆಗೊಳ್ಳುತ್ತಿರುವುದು ಸ್ಪಷ್ಟ ಉದಾಹರಣೆ. ನಾವುಗಳು ಯಾವುದೇ ಅನ್ಯ ಜಾತಿಯವರನ್ನು ಹಿಂದೂ ಧರ್ಮಕ್ಕೆ ಸೇರುವಂತೆ ಒತ್ತಡ ಹೇರುವಂಥಹ ನೀಚ ಕೃತ್ಯವನ್ನು ಮಾಡುತ್ತಿಲ್ಲ. ಆದರೆ ಎಲ್ಲರೂ ಕಟಿಬದ್ಧರಾಗಿ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಅಯೋಧ್ಯೆ ವಿಚಾರದಲ್ಲಿ ನಮ್ಮ ಪರವಾಗಿ ತೀರ್ಪು ಹೊರಬಿದ್ದಿರುವುದು ಸಂತಸ ತಂದಿದೆ. ಇದೇ ರೀತಿಯಲ್ಲಿ ದತ್ತ ಪೀಠದ ಬಗ್ಗೆ ಕೂಡ ತೀರ್ಪು ಬಂದರೆ ಒಳ್ಳೆಯದು. ದತ್ತ ಪೀಠವು ಶೃಂಗೇರಿ, ಧರ್ಮಸ್ಥಳ, ಹೊರನಾಡಿನಂಥಹ ತೀರ್ಥ ಕ್ಷೇತ್ರಗಳ ರೀತಿಯಲ್ಲಿ ಪವಿತ್ರವಾದ ಸ್ಥಳ. ಕಾಲದ ಹೊಡೆತಕ್ಕೆ ಸಿಕ್ಕಿ ಇಂದು ಅನ್ಯ ಧರ್ಮೀಯರ ಪಾಲಾಗಿದೆ. ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕು. ಸರಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ನಿರ್ಣಯವನ್ನು ಕೈಗೊಳ್ಳಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ನೂರಕ್ಕೂ ಹೆಚ್ಚು ಬೈಕುಗಳಲ್ಲಿ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹಳೇಕೋಟೆ ಮನೋಜ್, ತರುವೆ ಆದರ್ಶ್, ಬಾಲಚಂದ್ರ, ಗೋ ರಕ್ಷಕ ಪ್ರಮುಖ್ ಅವಿನಾಶ್, ತಾಲ್ಲೂಕು ಸಂಚಾಲಕ ವಿನಯ್ ಶೆಟ್ಟಿ, ನಗರ ತಾಲ್ಲೂಕು ಸಂಚಾಲಕ ಮಧು, ತಾಲ್ಲೂಕು ಸಹ ಸಂಚಾಲಕ ಅಜಿತ್, ತಾಲ್ಲೂಕು ತತ್ಸಂಗ ಪ್ರಮುಖ್ ಚಿರಾಗ್, ಪ್ರವೀಣ್ ಪೂಜಾರಿ, ಸಂತೋಷ್, ಹೆಸಗಲ್ ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ್ ಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಜರಂಗದಳದ ಕಾರ್ಯಕರ್ತರುಗಳು ಹಾಜರಿದ್ದರು. ಕಾರ್ಯಕ್ರಮದ ನಿಮಿತ್ತ ಬೆಳಗ್ಗೆಯಿಂದಲೇ ಮೂಡಿಗೆರೆಯಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.










