ಮೂಡಿಗೆರೆ : ಸಂಪೂರ್ಣ ಹದಗೆಟ್ಟ ಮೂಲರಹಳ್ಳಿ ದೇವರಮನೆ ರಸ್ತೆ-ದುರಸ್ಥಿಗೆ ಗ್ರಾಮಸ್ಥರ ಆಗ್ರಹ…

479

ಮೂಡಿಗೆರೆ  : ಗೌಡಹಳ್ಳಿ ಕ್ರಾಸ್‍ನಿಂದ ಮೂಲರಹಳ್ಳಿ, ಗುತ್ತಿಹಳ್ಳಿ, ದೇವರಮನೆಗೆ ತಲುಪುವ ರಸ್ತೆಯು ಸಂಪೂರ್ಣವಾಗಿ ಹಾನಿಯಾಗಿದ್ದು, ದುರಸ್ಥಿ ಮಾಡುವಂತೆ ಮೂಲರಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೂಲರಹಳ್ಳಿ ಗ್ರಾಮಸ್ಥ ಹರೀಶ್ ಅವರು ಮಾತನಾಡಿ ಗ್ರಾಮೀಣ ಭಾಗದ ಈ ರಸ್ತೆಯಲ್ಲಿ ದಿನನಿತ್ಯ ಸ್ಥಳಿಯರು ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಇಲ್ಲಿನ ಗ್ರಾಮಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ. ಬಾಡಿಗೆ ವಾಹನಗಳಲ್ಲಿ ಸಂಚರಿಸುವಾಗ 10 ಕಿ.ಮಿ ಸಂಚರಿಸಲು ಸುಮಾರು 1 ತಾಸು ಬೇಕಾಗುತ್ತದೆ. ಕಾಡಾನೆ ಹಾವಳಿ ಇರುವ ಪ್ರದೇಶ ಇದಾಗಿದ್ದು, ಕಳೆದ 20 ವರ್ಷಗಳ ಹಿಂದೆ ಈ ರಸ್ತೆ ಡಾಂಬಾರೀಕರಣ ಮಾಡಲಾಗಿದ್ದು, ಈಗ ಡಾಂಬಾರು ಕಿತ್ತು ಹೋಗಿ ಹೊಂಡ ಗುಂಡಿಗಳು ನಿರ್ಮಾಣವಾಗಿದೆ ಎಂದರು.
ಮೂಲರಹಳ್ಳಿ ಗ್ರಾಮಸ್ಥ ವಿಜಯ್ ಅವರು ಮಾತನಾಡಿ ಜನರಿಗೆ ಅನಾರೋಗ್ಯ ಸಮಸ್ಯೆ ಎದುರಾದರೆ ಸಕಾಲಕ್ಕೆ ಪಟ್ಟಣಕ್ಕೆ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಟೋ ಸೇರಿದಂತೆ ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಬರಲು ಹಿಂಜರಿಯುತ್ತಿವೆ. ಬಂದರೂ ಕೂಡ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಇದರಿಂದಾಗಿ ಬಡವರ್ಗದವರೆ ಹೆಚ್ಚಿರುವ ಇಲ್ಲಿನವರಿಗೆ ಸಮಸ್ಯೆಯಾಗಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ಥಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮೂಲರಹಳ್ಳಿ ಗ್ರಾಮಸ್ಥರಾದ ಶಿವಕುಮಾರ್, ಜಗದೀಶ್ ಮುಂತಾಧವರು ಇದ್ದರು.