ಕಳಸ : ಜನರ ಸಮಸ್ಯೆಗಳಿಗೆ ಉತ್ತರ ನೀಡಬೇಕಾದ ಅಧಿಕಾರಿಗಳು ಗ್ರಾಮ ಸಭೆಗೆ ಗೈರಾದ ಪರಿಣಾಮ ಸಂಸೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಮೊದಲನೆ ಗ್ರಾಮ ಸಭೆ ರದ್ದಾಗಿದೆ.
ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳೊದಕ್ಕೆ ಗ್ರಾಮ ಸಭೆಗೆ ಹಾಜರಾಗಿದ್ದರು. ಆದರೆ ಗ್ರಾಮ ಸಭೆಯಲ್ಲಿ ನೋಡಲ್ ಆಫಿಸರ್, ಜಿಲ್ಲಾ ಪಂಚಾಯಿತಿ ಇಂಜಿನೀಯರ್, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.
ನಮ್ಮ ಸಮಸ್ಯೆಗಳನ್ನು ಯಾರ ಜೊತೆ ಹೇಳಿಕೊಳ್ಳೋದಕ್ಕೆ ಇತ್ತೋ ಅವರೆ ಗ್ರಾಮ ಸಭೆಗೆ ಗೈರಾಗಿದ್ದಾರೆ. ಅಧಿಕಾರಿಗಳು ಇಲ್ಲದೆ ಯಾವ ಕಾಟಚಾರಕ್ಕಾಗಿ ಗ್ರಾಮ ಸಭೆ ನಡೆಸುವುದು.ಎಲ್ಲಾ ಅಧಿಕಾರಿಗಳು ಸಭೆಗೆ ಹಾಜರಾದರೆ ಮಾತ್ರ ಗ್ರಾಮಸಭೆಯನ್ನು ನಡೆಸಿ ಎಂದು ಗ್ರಾಮಸ್ಥರುಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಿ.ಶ್ರೇಯಂಸ ಕುಮಾರ್ ಮಾತನಾಡಿ ಪಂಚಾಯಿತಿಯ ಹೊಸ ಆಡಳಿತದ ಮೊದಲನೆ ಗ್ರಾಮ ಸಭೆ ಇದಾಗಿದೆ. ಈ ಸಭೆಗೆ ಮುಖ್ಯವಾಗಿ ಭಾಗವಹಿಸಬೇಕಾದ ಅಧಿಕಾರಿಗಳು ಗೈರಾಗಿದ್ದಾರೆ. ನಮ್ಮ ಗ್ರಾಮದಲ್ಲಿರುವ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳುವಂತ ಅಧಿಕಾರಿಗಳು ಮುಖ್ಯವಾಗಿ ಬೇಕಾಗುತ್ತದೆ. ಅವರ ಪರವಾಗಿ ಬೇರೆಯವರಿಗೆ ಉತ್ತರ ಕೊಡಲು ಸಾಧ್ಯವಿಲ್ಲ. ಜನಹಿತಕ್ಕಾಗಿ ಮಾಡುವ ಗ್ರಾಮಸಭೆಯಾಗಬೇಕು ಹೋರತು ನಾಮಕಾವಸ್ಥೆಗೆ ಮಾಡು ಗ್ರಾಮ ಸಭೆಗಳು ಆಗಬಾರುದು. ಆದ್ದರಿಂದ ಗ್ರಾಮ ಸಭೆ ಮಾಡುವುದರಲ್ಲಿ ಅರ್ಥವಿಲ್ಲ. ಈ ಸಭೆಯನ್ನು ಮಾರ್ಚ್ 8 ಕ್ಕೆ ಮುಂದೂಡಿ ಅಂದು ಎಲ್ಲಾ ಅಧಿಕಾರಿಗಳು ಗ್ರಾಮ ಸಭೆಗೆ ಬರುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಜಲಜಾಕ್ಷಿ, ಸೋಸಿಯಲ್ ಅಡಿಟ್ ಸಂಯೋಜಕಿ ರೇಷ್ಮಾ, ಪಿಡಿಒ ಕಾಷಪ್ಪ, ಸದಸ್ಯರಾದ ರವಿ, ಮಂಜುನಾಥ್ ಇತರರು ಇದ್ದರು.










