ಚಿಕ್ಕಮಗಳೂರು : ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದು ದೇಶದಲ್ಲಿ ರೈತರು ನಡೆಸಿದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ರೈತ ಹಾಗೂ ಪ್ರಗತಿಪರ ಮುಖಂಡ ಹೆಚ್.ಹೆಚ್.ದೇವರಾಜ್ ಅವರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ದೇವರಾಜ್ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕರಾಳ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸತತ 7 ತಿಂಗಳುಗಳ ಕಾಲ ರೈತರು ನಿರಂತರ ಹೋರಾಟ ನಡೆಸಿ 700 ಕ್ಕೂ ಹೆಚ್ಚು ರೈತ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಕೊನೆಗೂ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದು ತಾನು ಜಾರಿಗೊಳಿಸಿರುವ ಕರಾಳ ಮಸೂದೆಗಳನ್ನು ರದ್ದುಗೊಳಿಸಿರುವುದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ತಿಳಿಸಿದ್ದಾರೆ.
ಮೂರು ಕರಾಳ ಮಸೂದೆಗಳ ವಿರುದ್ಧ ಹೋರಾಟ ನಡೆಸಿದ ಸಾವಿರಾರು ಸಂಖ್ಯೆ ರೈತರಿಗೆ ವ್ಯಾಪಕವಾದ ನಷ್ಟವಾಗಿದೆ. ನೂರಾರು ರೈತರ ಬಲಿದಾನವಾಗಿದೆ. ಈ ಎಲ್ಲಾ ಅನಾಹುತಕ್ಕೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ತಿಳಿಸಿರುವ ದೇವರಾಜ್ ಅವರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಕನಿಷ್ಟ 50 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ನಿನ್ನೆ ಕಡೂರಿನಲ್ಲಿ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿರುವುದನ್ನು ಸ್ವಾಗತಿರುವುದಾಗಿ ತಿಳಿಸಿರುವ ದೇವರಾಜ್ ಅವರು ಹಿರಿಯ ಮುಖಂಡರಾಗಿರುವ ದತ್ತ ಹಾಗೂ ಅವರ ಬೆಂಬಲಿಗರು ಜಾತ್ಯಾತೀತ ನಿಲುವನ್ನು ಬೆಂಬಲಿಸಲು ನಿರ್ಧರಿಸಿರುವುದನ್ನು ಅಭಿನಂದನೆ ಸಲ್ಲಿಸಿದ್ದಾರೆ.










