ಹಾಸನ : ಮೂರು ತಿಂಗಳ ಹಿಂದೆ ಸಮಾಧಿಯಲ್ಲಿ ಹೂತಿದ್ದ ಶವ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ನಡೆದಿದ್ದು, ವಾಮಾಚಾರಕ್ಕಾಗಿ ಶವ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.
ವಯೋ ಸಹಜ ಕಾರಣದಿಂದ ಕಳೆದ ಮೂರು ತಿಂಗಳ ಹಿಂದೆ ಲಕ್ಷ್ಮಮ್ಮ(85) ಎಂಬುವವರು ಮೃತಪಟ್ಟಿದ್ದರು. ಅವರನ್ನು ಅವರ ಮಕ್ಕಳು ತಮ್ಮ ಸ್ವಂತ ಜಮೀನಿನಲ್ಲಿ ಮಣ್ಣು ಮಾಡಿದ್ದರು. ಆದರೆ ಇದೀಗ ಮೃತದೇಹವನ್ನು ಯಾರೋ ಕಿಡಿಗೇಡಿಗಳು ಕದ್ದೊಯ್ದಿರುವುದು ಪತ್ತೆಯಾಗಿದ್ದು, ವಾಮಾಚಾರಕ್ಕಾಗಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ.
ತಾಯಿಯನ್ನು ಮಣ್ಣು ಮಾಡಿದ್ದ ಜಾಗದಲ್ಲಿ ಗೋರಿ ಕಟ್ಟಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಇದೀಗ ಯಾರೋ ತಾಯಿಯ ಮೃತದೇಹವನ್ನು ಕದ್ದೊಯ್ದಿದ್ದಾರೆ. ಹೀಗಾಗಿ ನಮ್ಮ ತಾಯಿಯ ಮೃತದೇಹ ಹುಡುಕಿಕೊಡಿ ಎಂದು ಮಕ್ಕಳು ಮತ್ತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










