ನವದೆಹಲಿ : ತಾಯಿಯೊಂದಿಗೆ ಮಲಗಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ತಲೆ ಕತ್ತರಿಸಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ನಡೆದಿದೆ. ತನ್ನ ತಾಯಿಯೊಂದಿಗೆ ಟಾಟಾನಗರ್ ರೈಲ್ವೆ ನಿಲ್ದಾಣದ ಫ್ಲಾಟ್ಫಾರ್ಮ್ ಬಳಿ ಮಲಗಿದ್ದ ಹೆಣ್ಣು ಮಗುವನ್ನು ಅಪಹರಣ ಮಾಡಿ ಈ ಕೃತ್ಯ ಎಸಗಿದ್ದು, ಪೋಷಕರು ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಜಮ್ಶೆಡ್ಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗುವಿನ ದೇಹ ದೊರಕಿದ್ದು, ಶ್ವಾನ ದಳದ ಸಹಾಯದಿಂದ ಮಗುವಿನ ತಲೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ವಿಷಯ ತಿಳಿದು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಶೆಡ್ಪುರದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.










